ದಕ್ಷಿಣ ಇಥಿಯೋಪಿಯಾದಲ್ಲಿ ಧಾರಾಕಾರ ಮಳೆಯಿಂದ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 229ಕ್ಕೆ ಏರಿಕೆಯಾಗಿದೆ. ಕೆಸರು ಮಣ್ಣಿನ ರಾಶಿಯಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಇಥಿಯೋಪಿಯಾದ ಕೆಂಚೊ ಷಚಾ ಗೋಝ್ದಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತ ಸಂಭವಿಸಿದೆ. ಗೊಫಾ ಪ್ರದೇಶದಲ್ಲಿ ಅಪಾರ ಹಾನಿ ಸಂಭವಿಸಿದೆ. ರವಿವಾರ ರಾತ್ರಿ ಸಂಭವಿಸಿದ ಭೂಕುಸಿತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ ಸೋಮವಾರ ಮತ್ತೆ ಭೂಕುಸಿತ ಉಂಟಾಗಿದೆ. ಆಳವಾದ ಕಮರಿಗಳಲ್ಲಿ ರಾಶಿ ಬಿದ್ದಿರುವ ಕಲ್ಲು ಮಣ್ಣುಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ಇದುವರೆಗೆ 229 ಮೃತದೇಹ ಪತ್ತೆಯಾಗಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಮೃತರಲ್ಲಿ ಮಕ್ಕಳು, ಗರ್ಭಿಣಿ ಮಹಿಳೆಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ತಂಡದ ಮೇಲೆಯೇ ಗುಡ್ಡವೊಂದು ಕುಸಿದು ಬಿದ್ದಿದ್ದು ಹಲವರು ನಾಪತ್ತೆಯಾಗಿದ್ದಾರೆ. ದುರಂತದಲ್ಲಿ ತಾಯಿ, ತಂದೆ, ಸಹೋದರ ಸೇರಿದಂತೆ ಇಡೀ ಕುಟುಂಬವನ್ನು ಕಳೆದುಕೊಂಡ ಕೆಲವು ಮಕ್ಕಳು ಅನಾಥವಾಗಿವೆ ಎಂದು ಗೊಫಾದ ಅಧಿಕಾರಿ ಮಾರ್ಕೋಸ್ ಮೆಲೆಸೆ ಹೇಳಿದ್ದಾರೆ.
ದಕ್ಷಿಣ ಇಥಿಯೋಪಿಯಾದ ಗೆಜ್ ಗೋಫಾ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 10:00 ರ ಸುಮಾರಿಗೆ ಮಾರಣಾಂತಿಕ ಭೂಕುಸಿತ ಸಂಭವಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದೆ. ಮೃತಪಟ್ಟವರಲ್ಲಿ 148 ಪುರುಷರು ಮತ್ತು 81 ಮಹಿಳೆಯರು ಸೇರಿದ್ದಾರೆ ಎಂದು ಗೋಫಾ ವಲಯ ಸರ್ಕಾರಿ ಸಂವಹನ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಥಿಯೋಪಿಯನ್ ರೆಡ್ ಕ್ರಾಸ್ ಅಸೋಸಿಯೇಷನ್ ಮತ್ತು ನೆರೆಯ ಪ್ರದೇಶಗಳು ಮತ್ತು ವಲಯಗಳ ವೃತ್ತಿಪರರು ಪ್ರಸ್ತುತ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯ ಮುಂದುವರೆಸಿದ್ದಾರೆ. ಇಥಿಯೋಪಿಯಾವು ಮಳೆಗಾಲದ ಮಧ್ಯದಲ್ಲಿರುವುದರಿಂದ ಮಾರಣಾಂತಿಕ ಭೂಕುಸಿತ ಸಂಭವಿಸಿದೆ. ಇದು ಜುಲೈನಲ್ಲಿ ಪ್ರಾರಂಭವಾಯಿತು ಮತ್ತು ಸೆಪ್ಟೆಂಬರ್ ಮಧ್ಯದವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಋತುಮಾನದ ಮಳೆ ಸಾಂದರ್ಭಿಕವಾಗಿ ಪೂರ್ವ ಆಫ್ರಿಕಾದ ದೇಶದ ಕೆಲವು ಭಾಗಗಳಲ್ಲಿ ಮಾರಣಾಂತಿಕ ಭೂಕುಸಿತಕ್ಕೆ ಕಾರಣವಾಗುತ್ತದೆ.