ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ತಾನು ಅಳವಡಿಸಿಕೊಂಡಿದ್ದ ವಿವಾದಾತ್ಮಕ ಅಂತ್ಯಕ್ರಿಯೆ ನೀತಿಯ ಕುರಿತು ಮುಸ್ಲಿಮರ ಕ್ಷಮೆಯನ್ನು ಅಧಿಕೃತವಾಗಿ ಕೇಳಲಾಗುವುದು ಎಂದು ಶ್ರೀಲಂಕಾ ಸರಕಾರ ಪ್ರಕಟಣೆಯಲ್ಲಿ ತಿಳಿಸಿದೆ.
2020ರಲ್ಲಿ ಶ್ರೀಲಂಕಾ ಸರಕಾರವು ಕೋವಿಡ್-19 ಸಂತ್ರಸ್ತರ ಅಂತ್ಯಕ್ರಿಯೆ ನಡೆಸುವ ಸಂದರ್ಭದಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ಕಡ್ಡಾಯ ಆದೇಶವನ್ನು ಹೊರಡಿಸಿತ್ತು. ಈ ಬಗ್ಗೆ ತೀವ್ರ ಸ್ವರೂಪದ ಅಂತಾರಾಷ್ಟ್ರೀಯ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಫೆಬ್ರವರಿ 2021ರಲ್ಲಿ ಆದೇಶವನ್ನು ಹಿಂಪಡೆಯಲಾಗಿತ್ತು.
ಶ್ರೀಲಂಕಾ ಸರಕಾರದ ಸಚಿವ ಸಂಪುಟ ಟಿಪ್ಪಣಿಯ ಪ್ರಕಾರ, ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾರ್ಚ್ 2020ರಲ್ಲಿ ಜಾರಿಗೊಳಿಸಲಾಗಿದ್ದ ನಿರ್ಧಾರಕ್ಕಾಗಿ ಮುಸ್ಲಿಂ ಸಮುದಾಯದ ಕ್ಷಮೆ ಕೋರುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ.
“ಸರಕಾರದ ಪರವಾಗಿ ಎಲ್ಲ ಸಮುದಾಯಗಳ ಕ್ಷಮೆ ಕೋರಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ” ಎಂದು ಅನುಮೋದನೆಯಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ವಿವಾದಾತ್ಮಕ ಕ್ರಮಗಳು ಮರುಕಳಿಸುವುದನ್ನು ತಡೆಯಲು ಶಾಸನವೊಂದನ್ನು ಪರಿಚಯಿಸಲೂ ಸಚಿವ ಸಂಪುಟ ನಿರ್ಧರಿಸಿದೆ.