ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವು ರೀತಿಯ ರೋಗ-ರುಜಿನಗಳು ಹೆಚ್ಚಾಗುತ್ತಿವೆ. ಅದರ ಮಧ್ಯೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡೆಂಗ್ಯೂ ಜೊತೆ ನಿಫಾ ವೈರಸ್ ಆತಂಕ ಶುರುವಾಗಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ನಿಫಾ ವೈರಸ್ ಆತಂಕ ಎದುರಾಗಿದೆ.
ಈಗಾಗಲೇ ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ಗೆ 14 ವರ್ಷದ ಬಾಲಕ ಮೃತಪಟ್ಟ ಬೆನ್ನಲ್ಲೇ ರಾಜ್ಯದ ಕೇರಳದ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಡೆಂಗ್ಯೂ ಕಾಯಿಲೆ ಹೆಚ್ಚಿರುವ ಹಾಟ್ಸ್ಪಾಟ್ಗಳಲ್ಲಿನ ನಾಗರಿಕರಿಗೆ ಸೊಳ್ಳೆ ಕಚ್ಚದಂತೆ ಡೀಟ್ ಕ್ರೀಮ್ ಹಾಗೂ ನೀಮ್ ಆಯಿಲ್ ವಿತರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಿಬಿಎಂಪಿಯ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಪ್ರತಿನಿತ್ಯ ಸರಾಸರಿ 150 ರಿಂದ 160 ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿವೆ. ಜುಲೈ 1 ರಿಂದ 22 ರವರೆಗೆ 3,304 ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಎಲ್ಲ ವಲಯಗಳ ಆಯುಕ್ತರು ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ವಿಭಾಗದ ಅಧಿಕಾರಿಗಳ ಜತೆ ಪ್ರತಿದಿನ ಸಭೆ ನಡೆಸಿ, ಮೇಲ್ವಿಚಾರಣೆ ಮಾಡಬೇಕು. ಅಲ್ಲದೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಹೆಚ್ಚಾಗಿ ಫಾಗಿಂಗ್ ಹಾಗೂ ಔಷಧ ಸಿಂಪಡಣೆ ಮಾಡಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.