ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಣದಿಂದ ಹಿಂದೆ ಸರಿದು, ಅಧ್ಯಕ್ಷೀಯ ಚುನಾವಣೆಗೆ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ, ಕಮಲಾ ಅವರು ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ಗಿಂತ ಎರಡು ಪಾಯಿಂಟ್ಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಸಮೀಕ್ಷೆ ವರದಿ ಮಾಡಿದೆ.
ಅಧ್ಯಕ್ಷರಾಗಿ ಮರು ಆಯ್ಕೆಯಾಗಲು ಬಯಸಿದ್ದ ಬೈಡನ್ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಭಾನುವಾರ ಘೋಷಿಸಿದ್ದರು. ಇದರಿಂದಾಗಿ ಕಮಲಾ ಹ್ಯಾರಿಸ್ ಅವರು ಡೆಮಾಕ್ರಟಿಕ್ ಪಕ್ಷದ ಸಂಭವನೀಯ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಸೋಮವಾರ ಮತ್ತು ಮಂಗಳವಾರ ಹೊಸ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗಿಂತ ಕಮಲ ಹ್ಯಾರಿಸ್ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗದೆ.
ಹಿಂದಿನ ವಾರದ ಸಮೀಕ್ಷೆಯಲ್ಲಿ ಬೈಡನ್ ಅವರು ಟ್ರಂಪ್ಗಿಂತ 2 ಪಾಯಿಂಟ್ಗಳ ಹಿನ್ನಡೆ ಅನುಭವಿಸಿರುವುದು ವರದಿಯಾಗಿತ್ತು.
ಹ್ಯಾರಿಸ್ ಅವರು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶೇಕಡ 56ರಷ್ಟು ನೋಂದಾಯಿತ ಮತದಾರರು ಒಪ್ಪಿಕೊಂಡಿದ್ದಾರೆ. ಈ ಕ್ಷಮತೆ ಟ್ರಂಪ್ ಅವರಿಗೆ ಇರುವುದಾಗಿ ಶೇಕಡ 49ರಷ್ಟು ಮತದಾರರು ಹೇಳಿದ್ದಾರೆ.