ಕಿರುತೆರೆಯ ನಟಿ ಜಾಸ್ಮಿನ್ ಭಾಸಿನ್ ಕಾಂಟ್ಯಾಕ್ಟ್ ಲೆನ್ಸ್ನ ಉಸಾಬರಿಯಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡಿರುವುದು ಸುದ್ದಿಯಾದ ಮೇಲೆ, ಲೆನ್ಸ್ ಧರಿಸುವಾಗ ಯಾವುದು ಸರಿ, ಯಾವುದು ತಪ್ಪು ಎಂಬುದು ಬಹಳಷ್ಟು ಚರ್ಚೆಗೆ ಒಳಗಾಗಿದೆಲೆನ್ಸ್ಗಳನ್ನು ಧರಿಸುವಾಗ ಸ್ವಚ್ಛತೆ ಮತ್ತು ಸುರಕ್ಷತೆಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಬೇಕು. ಅದನ್ನು ಧರಿಸುವಾಗ ಮತ್ತು ತೆಗೆಯುವಾಗ ಕೈಗಳು ಶುಚಿಯಾಗಿರಬೇಕು. ಲೆನ್ಸ್ ಹಾಕಿಕೊಂಡು ನಿದ್ದೆಯನ್ನಂತೂ ಮಾಡಲೇಬಾರದು. ಇದಕ್ಕೆ ಕಾರಣಗಳೂ ಇವೆ. ಕಣ್ಣುಗಳು ಮುಚ್ಚಿದ್ದಾಗ ಅಥವಾ ನಿದ್ದೆ ಮಾಡಿದ್ದಾಗ ಈ ಭಾಗಕ್ಕೆ ರಕ್ತಸಂಚಾರ ಕಡಿಮೆ ಇರುತ್ತದೆ. ಅಂದರೆ ಆಮ್ಲಜನಕದ ಪೂರೈಕೆಯೂ ಕಡಿಮೆ ಇರುತ್ತದೆ. ಹೀಗಿದ್ದಾಗ ಸೋಂಕುಗಳ ಸಂಭವ ಹೆಚ್ಚು. ಜೊತೆಗೆ, ಕಣ್ಣಿನ ಕಾರ್ನಿಯದಲ್ಲಿ ಉರಿಯೂತ ಕಾಣಿಸಿಕೊಂಡು, ಕಾರ್ನಿಯಲ್ ಎಡೆಮಾಗೆ ದಾರಿ ಮಾಡಿಕೊಡುತ್ತದೆ. ಇದನ್ನು ಸೂಕ್ತ ಚಿಕಿತ್ಸೆಯ ಮೂಲಕ ಸರಿಪಡಿಸಿಕೊಳ್ಳದಿದ್ದರೆ, ದೃಷ್ಟಿಗೆ ಸಂಚಕಾರ ಬರುವ ಸಾಧ್ಯತೆಯಿದೆ
ಲೆನ್ಸ್ಗಳನ್ನು ಧರಿಸಿದಾಗ ಮಾಡಬೇಕಾದ್ದೇನು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ನಿದ್ದೆ ಮಾಡುವಾಗ ಲೆನ್ಸ್ಗಳನ್ನು ತೆಗೆದಿರಿಸಿ. ಅದೇನು ರಾತ್ರಿಯ ದೀರ್ಘ ನಿದ್ದೆಯೇ ಆಗಬೇಕೆಂದಿಲ್ಲ. ನಡುಹಗಲಿನ ಅರ್ಧ ತಾಸಿನ ಚುಟುಕು ನಿದ್ದೆಯಾದರೂ, ಅದಷ್ಟು ಹೊತ್ತು ಕಣ್ಣುಗಳಿಗೆ ಲೆನ್ಸ್ನಿಂದ ಬಿಡುವು ನೀಡಿ. ಇದು ಆರೋಗ್ಯಕರ ಅಭ್ಯಾಸಗಳಲ್ಲಿ ಒಂದು
ಲೆನ್ಸ್ ಧರಿಸುವಾಗ ಮತ್ತು ತೆಗೆಯುವಾಗ ಕೈಗಳನ್ನು ಕಡ್ಡಾಯವಾಗಿ ಶುಚಿ ಮಾಡಿಕೊಳ್ಳಿ. ಅದಲ್ಲದೆ, ಲೆನ್ಸ್ ಶುಚಿ ಗೊಳಿಸಲು ಯಾವ ಮಾರ್ಗದರ್ಶನಗಳನ್ನು ನೀಡಲಾಗಿದೆಯೊ ಅದನ್ನು ತಪ್ಪದೆ ಪಾಲಿಸಿ. ಅದಕ್ಕೆ ರೋಗಾಣುಗಳು ಅಂಟದಂತೆ ಕಾಪಾಡಲು ಕೆಲವು ನಿಯಮಗಳನ್ನು ಲೆನ್ಸ್ ತಯಾರಕರು ನಮೂದಿಸಿರುತ್ತಾರೆ. ಕೆಲವೊಮ್ಮೆ ನೇತ್ರವೈದ್ಯರೂ ನಿರ್ದೇಶನಗಳನ್ನು ನೀಡಿರಬಹುದು. ಈ ತಜ್ಞರ ಮಾತುಗಳನ್ನು ತಪ್ಪಬೇಡಿ. ಜೊತೆಗೆ, ಲೆನ್ಸ್ ಒಣಗದಂತೆ ಅದಕ್ಕೆ ಡ್ರಾಪ್ಸ್ ಉಪಯೋಗಿಸಿ
ಕಾಲಕಾಲಕ್ಕೆ ನೇತ್ರ ತಪಾಸಣೆಯನ್ನು ಮಾಡಿಸಿಕೊಳ್ಳಿ. ಲೆನ್ಸ್ ಬದಲಿಸುವುದು ಅಗತ್ಯವೇ, ಈಗಿರುವುದು ಸಾಕೇ ಮುಂತಾದ ವಿಷಯಗಳನ್ನು ವೈದ್ಯರೇ ಪರಿಶೀಲಿಸುತ್ತಾರೆ. ಕಣ್ಣುಗಳು ಕೆಂಪಾದರೆ, ಉರಿಯುತ್ತಿದ್ದರೆ, ಲೆನ್ಸ್ ಧರಿಸಿದಾಗ ಕಿರಿಕಿರಿ ಆಗುತ್ತಿದ್ದರೆ, ಸೋಂಕಿನ ಯಾವುದೇ ಲಕ್ಷಣಗಳಿದ್ದರೆ ಮೊದಲು ವೈದ್ಯರನ್ನು ಭೇಟಿ ಮಾಡಿ
ಲೆನ್ಸ್ಗಳ ಅವಧಿ ಮುಗಿದಿದ್ದರೆ, ಅವುಗಳನ್ನು ಧರಿಸಬೇಡಿ. ಅವುಗಳ ಎಕ್ಸ್ಪೈರಿ ದಿನಾಂಕವನ್ನು ಗಮನಿಸಿ. ಲೆನ್ಸ್ಗಳು ಕೊಂಚ ಮುಕ್ಕಾಗಿದ್ದರೂ ಅವುಗಳನ್ನು ಧರಿಸಕೂಡದು. ಇದರಿಂದ ಕಣ್ಣಿಗೆ ಹಾನಿಯಾಗುತ್ತದೆ. ನಮ್ಮ ನೇತ್ರಗಳು ಅತ್ಯಂತ ಸೂಕ್ಷ್ಮವಾದ ಅಂಗಗಳು ಎಂಬುದನ್ನು ಸದಾ ಗಮನದಲ್ಲಿ ಇರಿಸಿಕೊಳ್ಳಿ. ಅವುಗಳನ್ನು ಕಾಳಜಿ ಮಾಡಿದಷ್ಟೂ ಈ ಲೋಕ ನಮಗೆ ಸ್ಪಷ್ಟವಾಗಿ ಕಾಣುತ್ತದೆ
ಕಣ್ಣಿಗೆ ಲೆನ್ಸ್ಗಳನ್ನು ಧರಿಸಿ, ಸ್ನಾನ ಮಾಡುವುದು, ಈಜುವುದು ಸಲ್ಲದು. ಕೆಲವೊಮ್ಮೆ ʻextended wearʼ ಎಂಬುದನ್ನು ಲೆನ್ಸ್ಗಳ ಕವರ್ ಮೇಲೆ ನಮೂದಿಸಲಾಗಿರುತ್ತದೆ. ಆದಾಗ್ಯೂ ಅವುಗಳನ್ನು ಧರಿಸಿ, ಮಲಗುವುದು, ಸ್ನಾನ ಮಾಡುವುದು, ಈಜುವುದೆಲ್ಲ ಸರಿಯಾದ ಕ್ರಮವಲ್ಲ. ನೀರಿನಲ್ಲಿರುವ ರೋಗಾಣುಗಳು ಲೆನ್ಸ್ಗೆ ಅಂಟಿಕೊಂಡು ಕಣ್ಣಿನ ಆರೋಗ್ಯವನ್ನು ಬುಡಮೇಲು ಮಾಡಬಹುದು