ಬೆಂಗಳೂರು: ವಿಧಾನಸಭೆಯಲ್ಲಿ ಮುಡಾ ಅಕ್ರಮದ ಚರ್ಚೆಗೆ ಮತ್ತೆ ಪ್ರತಿಪಕ್ಷಗಳ ಪಟ್ಟು ಹಿಡಿದಿದ್ದು ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮುಂದುವರಿಸಿವೆ.
ಕಲಾಪ ಆರಂಭವಾಗುತ್ತಿದ್ದಂತೆ ಒಂದೇ ಒಂದು ಗಂಟೆಗೆ ಚರ್ಚೆಗೆ ಕೊಡಿ ಎಂದು ಬಿಜೆಪಿ ಶಾಸಕರು ಆಗ್ರಹಿಸಿದರು.
ಇದೇ ವೇಳೆ ತುಳು ಭಾಷೆಯಲ್ಲಿ ಮಾತನಾಡಿ ಸ್ಪೀಕರ್ಗೆ ಚರ್ಚೆಗೆ ಕೇಳಿದ ಸುನೀಲ್ ಕುಮಾರ್ ತುಳುವಿನಲ್ಲಿ ಮಾತನಾಡಿ ಇಲ್ಲಿ ಚರ್ಚೆಗೆ ಕೊಟ್ಟರೇ ಏನು ಸಮಸ್ಯೆ ಎಂದರು.
ಇದಕ್ಕೆ ಏನು ಸಮಸ್ಯೆ ಇಲ್ಲ ಎಂದು ತುಳುವಿನಲ್ಲೇ ಸ್ಪೀಕರ್ ಖಾದರ್ ಉತ್ತರ ನೀಡಿದ್ರೂ ಚರ್ಚೆಗೆ ಅವಕಾಶ ಕೊಡಲಿಲ್ಲ. ನಾನು ಹೇಳಿದ ಹಾಗೆ ಕೇಳಿದರೆ ನಿಮಗೆ ಏನು ಸಮಸ್ಯೆ ಎಂದು ತುಳುವಿನಲ್ಲೇ ಸ್ಪೀಕರ್ ಮರು ಪ್ರಶ್ನೆ ಹಾಕಿದ್ರು. ಈ ವೇಳೆ ಯಾವುದೋ ಭಾಷೆಯಲ್ಲಿ ಮಾತಾಡುತ್ತಿದ್ದೀರಾ ಎಂದ ಆಡಳಿತ ಪಕ್ಷದ ಕೆಲ ಶಾಸಕರು ಕಿಚಾಯಿಸಿದ್ರು. ಯಾವುದೋ ಅಲ್ಲ, ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ ಇರುವ ತುಳು ಭಾಷೆ ಎಂದ ಸ್ಪೀಕರ್ ಸಮರ್ಥಿಸಿಕೊಂಡರು.
ವಿರೋಧ ಪಕ್ಷಗಳ ಧರಣಿ ನಡುವೆಯೇ ಕಲಾಪ ಕಾರ್ಯಕಲಾಪಗಳನ್ನು ನಡೆಸಿದ ಸ್ಪೀಕರ್, ವಿಧೇಯಕಗಳ ಅಂಗೀಕಾರ ಪ್ರಸ್ತಾವನೆಯನ್ನು ಮುಗಿಸಿದರು. ವಿರೋಧ ಪಕ್ಷಗಳ ಗದ್ದಲದ ನಡುವೆಯೇ 6 ವಿಧೇಯಕಗಳ ಅಂಗೀಕಾರ, ನಾಲ್ಕು ನಿರ್ಣಯಗಳ ಅಂಗೀಕಾರವೂ ನಡೆಯಿತು. ಅಂತಿಮವಾಗಿ ಕಲಾಪವನ್ನ ಮಧ್ಯಾಹ್ನಕ್ಕೆ ಮುಂದೂಡಿದರು.