ಶುಂಠಿ. ಈ ಹೆಸರಿನಲ್ಲೇ ನಾಲಿಗೆ ಚುರ್ರೆನಿಸುವ ಒಂದು ಗಮ್ಮತ್ತಿದೆ. ನೋಡಲು ಒರಟೊರಟಾಗಿ ಮೈಯಲ್ಲ ಮಣ್ಣು ಮೆತ್ತಿಕೊಂಡು ಜೊತೆಗೆ ತನಗೆ ಬೇಕಾದ ರೀತಿಯಲ್ಲಿ ಕವಲು ಹೊಡೆದುಕೊಂಡು ತನ್ನನ್ನು ಅಚ್ಚುಕಟ್ಟಾಗಿ ಶುಚಿ ಮಾಡಿಕೊಂಡೇ ಉಪಯೋಗಿಸ ಬೇಕೆಂದು ಆಜ್ಞೆ ಮಾಡಿ, ಇಷ್ಟ ಪಟ್ಟು ತಿನ್ನಲು ಹೋದರೆ ತನ್ನ ಅದ್ಬುತ ಘಾಟಿನ ಖಾರವನ್ನು ನೇರವಾಗಿ ನಾಲಿಗೆಯಿಂದ ಮೆದುಳಿಗೆ ಬಡಿಯುವಂತೆ ಮಾಡುವ ತರಕಾರಿ ಗಳ ಗುಂಪಿಗೆ ಸೇರಿದ ಒಂದು ಹೆಸರಾಂತ ಅಡುಗೆ ಸಾಮಗ್ರಿ.
ಶುಂಠಿ ಟೀ ತನ್ನ ಘಮಗುಡುವ ಪರಿಮಳದೊಂದಿಗೆ ಕುಡಿಯಲು ಸಹ ನಾಲಿಗೆಗೆ ರುಚಿ ಕೊಡುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಸಂಬಂಧ ಪಟ್ಟರಂತೂ, ಇದರಲ್ಲಿ ಬಹಳಷ್ಟು ಖನಿಜಾಂಶಗಳು ಸೇರಿರುವುದರಿಂದ ಬೆಳಗಿನ ಸಮಯದಲ್ಲಿ ಅದರಲ್ಲೂ ಖಾಲಿಹೊಟ್ಟೆಯಲ್ಲಿ ಶುಂಠಿ ಚಹಾ ಕುಡಿದರೆ ಬಹಳ ಬೇಗನೆ ಈ ಖನಿಜಾಂಶಗಳು ನಿಮ್ಮ ದೇಹಕ್ಕೆ ಹೀರಿಕೊಂಡು ದೇಹಕ್ಕೆ ಅಗತ್ಯವಿರುವ ತಮ್ಮ ಕೆಲಸಗಳನ್ನು ಪ್ರಾರಂಭ ಮಾಡುತ್ತವೆ.
ಇತ್ತೀಚಿನ ದಿನಗಳಲ್ಲಿ ಮನುಷ್ಯನ ಬದಲಾದ ಜಡ ರೀತಿಯ ಜೀವನ ಶೈಲಿಯಿಂದ ಇನ್ನಿಲ್ಲದ ರೋಗಗಳನ್ನು ತನ್ನಲ್ಲಿ ಆಹ್ವಾನ ಮಾಡಿಕೊಳ್ಳುತ್ತಿದ್ದಾನೆ. ಇದರಲ್ಲಿ ದೇಹದ ಕೊಬ್ಬಿನಂಶ ಹೆಚ್ಚಾಗಿ ಬೇಡದ ಕಡೆಯೆಲ್ಲಾ ಬೊಜ್ಜು ಬೆಳೆದು ದೇಹದ ತೂಕ ಹೆಚ್ಚಾಗುತ್ತಿರುವುದು ಕೇವಲ ಒಂದು ಉದಾಹರಣೆಯಷ್ಟೇ. ಶುಂಠಿ ಚಹಾ ಇದಕ್ಕೊಂದು ಪರಿಹಾರ ಕೊಡುತ್ತದೆ.
ಗ್ಯಾಸ್ಟಿಕ್ ಸಮಸ್ಯೆ ಈಗಿನ ಕಾಲದಲ್ಲಿ ವ್ಯಾಯಾಮ ಮಾಡುವವರನ್ನು ಸಹ ಬಿಟ್ಟಿಲ್ಲ. ತುಂಬಾ ಜನರು ಅಷ್ಟೇ ಏಕೆ ನಾವೇ ಒಮ್ಮೊಮ್ಮೆ ಹೇಳುತ್ತಿರುತ್ತೇವೆ, ” ಬೆಳಗ್ಗೆ ತಿಂದ ಆಹಾರ ಜೀರ್ಣವೇ ಆಗಿಲ್ಲ. ಎದೆಯಲ್ಲೇ ಒತ್ತಿದಂತೆ ಆಗುತ್ತಿದೆ, ಸದ್ಯಕ್ಕೆ ಯಾವ ಆಹಾರವೂ ಬೇಡ ” ಎಂದು. ಇದಕ್ಕೆ ಕಾರಣ ದೇಹದ ಅಜೀರ್ಣತೆ. ಸರಿಯಾದ ರೀತಿಯಲ್ಲಿ ಆಹಾರ ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶಗಳು ಹೀರಿಕೊಳ್ಳದೇ ಹೋದಾಗ ಇಂತಹ ಸಮಸ್ಯೆ ಎದುರಾಗುತ್ತದೆ. ಆದರೆ ಪ್ರತಿ ದಿನ ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ಶುಂಠಿ ಚಹಾವನ್ನು ಸೇವಿಸುವುದರಿಂದ ಚೆನ್ನಾಗಿ ಜೀರ್ಣ ಆಗುವಂತೆ ಮಾಡುತ್ತದೆ.