ಬಾಗಲಕೋಟೆ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ರಣಮಳೆ ಸುರಿಯುತ್ತಿರುವ ಕಾರಣ ಅಧಿಕೃತವಾಗಿ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣ ನದಿಗೆ 21 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ. ನೀರು ಬಿಡುಗಡೆ ಮಾಡಿದ ಪರಿಣಾಮ ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದೆ.
ಸದ್ಯಕ್ಕೆ ಕೃಷ್ಣಾ ನದಿಯಲ್ಲಿ 2.05 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಅಪಾಯದ ಮಟ್ಟವನ್ನು ಮೀರಿ ನದಿ ಹರಿಯುತ್ತಿದೆ. ಈಗಾಗಲೇ ಕೆಲವು ಗ್ರಾಮಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಕೂಡ ಜಲಾವೃತವಾಗಿದ್ದು ನದಿ ದಂಡೆಯ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕೊಯ್ನಾ ಜಲಾಶಯ 105 ಟಿಎಂಸಿ ಸಾಮರ್ಥ್ಯದ ಡ್ಯಾಮ್ ಇದಾಗಿದ್ದು ಕಳೆದ 15 ದಿನಗಳ ನಿರಂತರ ಮಳೆಯಿಂದ ಪ್ರತಿಶತ 80ರಷ್ಟು ತುಂಬಿದರಿಂದ ಇವತ್ತು ಅಧಿಕೃತವಾಗಿ ಕೃಷ್ಣಾ ನದಿಗೆ 21ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ನಾಳೆಯೂ ಕೂಡ ಆ ಭಾಗದಲ್ಲಿ ಮಳೆ ಮುಂದವರೆದರೆ ಮತ್ತಷ್ಟು ನೀರು ನದಿಗೆ ಬಿಡುಗಡೆಯಾಗಲಿದೆ.