ಅಪಾರ್ಟ್ಮೆಂಟ್ಗಳಲ್ಲಿ ನಾಯಿಗಳಿಗೆ ಮುಕ್ತ ಸ್ವಾತಂತ್ರ್ಯ ಸಿಕ್ಕಿದ್ದು, ಬಿಬಿಎಂಪಿ ಹೊಸ ಗೈಡ್ಲೈನ್ಸ್ ಜಾರಿ ಮಾಡಿದೆ. ಇದರಲ್ಲಿ ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದಂತಾಗಿದೆ.
ವಸತಿ ಕಲ್ಯಾಣ ಸಂಘಗಳು ಹೌಸಿಂಗ್ ಸೊಸೈಟಿಗಳ ಒಳಗೆ ಯಾವುದೇ ರೀತಿಯ ಸಾಕುಪ್ರಾಣಿಗಳನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ನಾಗರಿಕ ಸಂಸ್ಥೆ ಕೂಡ ಇದನ್ನೇ ಒತ್ತಿ ಹೇಳಿದೆ. ಇದರ ಜತೆಗೆ ಬಿಬಿಎಂಪಿ ಸಾಕುಪ್ರಾಣಿಗಳಿಗೆ ಆಹಾರ ನೀಡುವ ಸಮುದಾಯಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ನಾಗರಿಕ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಸಾಕುಪ್ರಾಣಿಗಳ ಬಗ್ಗೆ ಆರ್ಡಬ್ಲ್ಯುಎಗಳ ವರ್ತನೆಯ ಬಗ್ಗೆ ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದೆ. ಸಾಕುಪ್ರಾಣಿಗಳ ಕುರಿತಾದ ಆರ್ಡಬ್ಲ್ಯುಎಗಳ ಬೈಲಾಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ ಮತ್ತು ಹೌಸಿಂಗ್ ಸೊಸೈಟಿಯೊಳಗೆ ಪ್ರಾಣಿಗಳ ಅಸ್ತಿತ್ವಕ್ಕೆ ಹಾನಿ ಮಾಡಬಾರದು ಎಂದು ಬಿಬಿಎಂಪಿ ಹೇಳಿದೆ. ಸಾಕುಪ್ರಾಣಿಗಳನ್ನು ಸಾಮಾನ್ಯ ಪ್ರದೇಶಗಳ ಪ್ರವೇಶಕ್ಕೆ ಅನುಮತಿಸಬೇಕು ಮತ್ತು ಲಿಫ್ಟ್ನಲ್ಲಿ ತೆರಳುವಾಗ ಮಾಸ್ಕ್ ಕಡ್ಡಾಯವಲ್ಲ ಎಂದೂ ತಿಳಿಸಿದೆ. ಇದರಿಂದ ಸಾಕುಪ್ರಾಣಿ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.
ಇದರ ಜತೆಗೆ ಕೋಲುಗಳಿಂದ ನಾಯಿಗಳನ್ನು ಓಡಿಸುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲಾಗುವುದು ಮತ್ತು ಎಲ್ಲ ಸಾರ್ವಜನಿಕ ಉದ್ಯಾನಗಳು, ಟೆಕ್ ಪಾರ್ಕ್ಗಳು ಮತ್ತಿತರ ಸಂಸ್ಥೆಗಳು ತಮ್ಮ ಆವರಣದಲ್ಲಿ ಸಾಕುಪ್ರಾಣಿಗಳ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡಲು ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ
ಆಹಾರ ನೀಡುವಾಗ ಪಾಲಿಸಬೇಕಾದ ಮಾರ್ಗಸೂಚಿ
ಬೀದಿ ನಾಯಿಗಳಿಗೆ ಆಹಾರವನ್ನು ನೀಡುವವರು ಮಾಂಸ ಮತ್ತು ಸಕ್ಕರೆ ಬಿಸ್ಕೇಟುಗಳನ್ನು ತಪ್ಪಿಸಲು ಸೂಚಿಸಲಾಗಿದೆ. ಏಕೆಂದರೆ ಇವು ಅವುಗಳನ್ನು ಹೈಪರ್ ಆಯಕ್ಟೀವ್ ಮಾಡುವ ಸಾಧ್ಯತೆ ಇದೆ.
ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಆಹಾರ ನೀಡಬಾರದು.
ಸೌಮ್ಯ ಆಹಾರವನ್ನು ಒದಗಿಸಲು ಸೂಚಿಸಲಾಗುತ್ತದೆ. ಏಕೆಂದರೆ ಇದು ಪ್ರಾಣಿಗಳು ಆಕ್ರಮಣಕಾರಿಯಾಗಿ ವರ್ತಿಸುವುದನ್ನು ತಡೆಯುತ್ತದೆ.
ಜಾಸ್ತಿ ಜನರ ಓಡಾಟ ಇದ್ದಾಗ ಆಹಾರವನ್ನು ನೀಡಬಾರದು.
ಸಾಕುಪ್ರಾಣಿಗಳ ಮಾಲೀಕರು ನೈರ್ಮಲ್ಯವನ್ನು ಕಾಪಾಡಬೇಕು ಮತ್ತು ಅವುಗಳನ್ನು ನಿಯಮಿತವಾಗಿ ಸ್ನಾನ ಮಾಡಿಸಿ ಆರೋಗ್ಯ ಪರಿಶೀಲಿಸುತ್ತಿರಬೇಕು.