ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಬೇರೆ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಕಾಟನ್ಪೇಟೆ ಪೊಲೀಸರು ಬಂಧಿಸಿದ್ದ ಹಿಂದೂ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ಠಾಣೆಯಲ್ಲಿ ಅಸ್ವಸ್ಥರಾಗಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಾತ್ರಿ 12 ಗಂಟೆಗೆ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿಲಾಗಿತ್ತು. ಬಂಧನದ ಬಳಿಕ ಠಾಣೆಯಲ್ಲಿ ಮಲಗಿದ್ದಾಗ ಮುಂಜಾನೆ 4.45ರಲ್ಲಿ ಅಸ್ವಸ್ಥಗೊಂಡಿದ್ದಾರೆ. ಪುನೀತ್ನನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು ಇದೀಗ ಕೆ.ಸಿ.ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಪೊಲೀಸ್ ಠಾಣೆಯಲ್ಲಿ ಪುನೀತ್ ಸುಸ್ತಾಗಿ ಮಲಗಿದ್ದ ಹಿನ್ನೆಲೆ ತಕ್ಷಣವೇ ಕಾಟನ್ ಪೇಟೆ ಪೊಲೀಸ್ ಸಿಬ್ಬಂದಿ ಆತನನ್ನು ಹೊತ್ತು ತಂದು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ನಿನ್ನೆ ರಾತ್ರಿ ಜೈಪುರದಿಂದ ಬಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್ ಗಳಲ್ಲಿ 4,500 ಕೆಜಿ ಮಾಂಸ ಇತ್ತು. ಆದರೆ ಈ ಮಾಂಸದ ಬಾಕ್ಸ್ ಗಳಲ್ಲಿ ಕುರಿಯ ಮಾಂಸದ ಜೊತೆ ನಾಯಿ ಮಾಂಸವನ್ನ ಮಿಕ್ಸ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ರೈಲಿನಿಂದ ಈ ಬಾಕ್ಸ್ ಗಳು ಹೊರಗೆ ಬರ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲೇ ತಡೆದಿದ್ದರು. ಬಳಿಕ ಈ ಬಾಕ್ಸ್ ಗಳಲ್ಲಿ ನಾಯಿ ಮಾಂಸ ಮಿಕ್ಸ್ ಆಗಿದೆ. ಸ್ವಚ್ಚತೆ ಇಲ್ಲ ಅಕ್ರಮವಾಗಿ ಸಾಗಟ ಮಾಡಲಾಗ್ತಿದೆ ಎಂದು ಆರೋಪಿಸಿದ್ರು.