ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. 2017ರಲ್ಲಿ ತಮಿಳು ಸಿನಿಮಾ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ವಿಶಾಲ್ ಆಯ್ಕೆಯಾಗಿದ್ದು ಇದೀಗ ಆ ಜಾಗಕ್ಕೆ ಮುರಳಿ ರಾಮಸ್ವಾಮಿ ಬಂದಿದ್ದಾರೆ. ವಿಶಾಲ್ ಕೌನ್ಸಿಲ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ರಾಮಸ್ವಾಮಿ ಮಾಡಿದ್ದಾರೆ. ಈ ವಿಚಾರದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಇದರ ವಿರುದ್ಧ ವಿಶಾಲ್ ಆಕ್ರೋಶ ಹೊರ ಹಾಕಿದ್ದಾರೆ.
2017ರಿಂದ 2019ರವರೆಗೆ ವಿಶಾಲ್ ತಮಿಳುನಾಡು ಸಿನಿಮಾ ನಿರ್ಮಾಪಕರ ಕೌನ್ಸಿಲ್ನ ಅಧ್ಯಕ್ಷರಾಗಿದ್ದರು. ಅವರ ವಿರುದ್ಧ ಹಣ ದುರ್ಬಳಕೆ ಆರೋಪ ಬಂದಿದೆ. 2019ರಲ್ಲಿ ತಮಿಳುನಾಡು ಸರ್ಕಾರ ವಿಶೇಷ ಅಧಿಕಾರಿಯನ್ನು ಈ ಪ್ರಕರಣದಲ್ಲಿ ನೇಮಕ ಮಾಡಿತ್ತು. ಲೆಕ್ಕವನ್ನು ನೋಡಿದಾಗ ಸುಮಾರು 12 ಕೋಟಿ ರೂಪಾಯಿ ದುರ್ಬಳಕೆ ಆಗಿರೋದು ತಿಳಿದು ಬಂದಿದೆ. 7.5 ಕೋಟಿ ರೂಪಾಯಿ ಹಣ ಕೌನ್ಸಿಲ್ ಬ್ಯಾಂಕ್ನಿಂದ ಹಾಗೂ ಇನ್ನು ಉಳಿದ ಐದು ಕೋಟಿ ರೂಪಾಯಿ ಹಣವನ್ನು ಆದಾಯ ಮತ್ತು ವೆಚ್ಚದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಈ ಹಣವನ್ನು ಹಿಂದಿರುಗಿಸುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು, ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಕೌನ್ಸಿಲ್ ಹೇಳಿದೆ.
ಇದಕ್ಕೆ ವಿಶಾಲ್ ಅವರು ಖಡಕ್ ಉತ್ತರ ನೀಡಿದ್ದಾರೆ. ‘ಎಲ್ಲ ಹಣವು ನಿರ್ಮಾಪಕರ ಕೌನ್ಸಿಲ್ನಲ್ಲಿರುವ ವಯಸ್ಸಾದ ಹಾಗೂ ಕಷ್ಟಪಡುತ್ತಿರುವ ಸದಸ್ಯರ ಕಲ್ಯಾಣಕ್ಕಾಗಿ ಬಳಕೆ ಮಾಡಲಾಗಿದೆ. ನಾವು ಮಾಡಿದ ಕೆಲಸದಿಂದ ಸದಸ್ಯರಿಗೆ ಹಾಗೂ ಸದಸ್ಯರ ಕುಟುಂಬಕ್ಕೆ ಸಹಾಯ ಆಗಿದೆ’ ಎಂದಿದ್ದಾರೆ.