ನವದೆಹಲಿ: 2024ರ ಕೇಂದ್ರ ಬಜೆಟ್ನಲ್ಲಿ ಯಾವ ರಾಜ್ಯಗಳಿಗೂ ಏನನ್ನೂ ನಿರಾಕರಿಸಿಲ್ಲ ಕಡೆಗಣಿಸಿಲ್ಲ. ಹಿಂದಿನಂತೆಯೇ ಎಲ್ಲಾ ರಾಜ್ಯಗಳೂ ಹಂಚಿಕೆ ಪಡೆದಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 2024-25ರ ಕೇಂದ್ರ ಬಜೆಟ್ನಲ್ಲಿ ಕೇವಲ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಮಾತ್ರ ಪರಿಗಣಿಸಿ, ಉಳಿದ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂಬ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಯಾವುದೇ ರಾಜ್ಯವನ್ನು ಕಡೆಗಣಿಸಿಲ್ಲ. 2014 ರಲ್ಲಿ ಆಂಧ್ರಪ್ರದೇಶವನ್ನು ವಿಭಜಿಸಿದ ನಂತರ ಕೇಂದ್ರವು ಕಾನೂನಿನ ಪ್ರಕಾರ ಆಂಧ್ರಪ್ರದೇಶವನ್ನ ಬೆಂಬಲಿಸುವ ಅಗತ್ಯವಿದೆ. ಬಜೆಟ್ನಲ್ಲಿ ಎಲ್ಲಾ ರಾಜ್ಯಗಳು ಹಿಂದಿನಂತೆ ಹಂಚಿಕೆ ಸ್ವೀಕರಿಸಿವೆ. ಆಂಧ್ರ ಪ್ರದೇಶವು ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆ ಅಡಿಯಲ್ಲಿ ರಾಜಧಾನಿ ನಿರ್ಮಿಸಲು ಹಾಗೂ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಕೇಂದ್ರದ ಬೆಂಬಲ ಬಯಸಿದೆ.
ನಾವೂ ಸಹ ಹೊಸ ರಾಜಧಾನಿ ನಿರ್ಮಾಣವನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಈ ಬಜೆಟ್ ಯುವ ಸಮೂಹದ ಅಭಿವೃದ್ಧಿಗೆ ಪೂರಕಗಿದೆ, ಸಮಗ್ರ ಪ್ಯಾಕೇಜ್ ಒದಗಿಸಿದೆ. ಅಸ್ತಿತ್ವದಲ್ಲಿರುವ ನಗರಗಳನ್ನು ಹೆಚ್ಚು ವಾಸಕ್ಕೆ ಯೋಗ್ಯ ಮತ್ತು ಫ್ಯೂಚರಿಸ್ಟಿಕ್ ಮಾಡಲು ನಾವು ತಂತ್ರಜ್ಞಾನ ಮತ್ತು ನವೀನ ನಗರ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ ಎಂದು ನುಡಿದಿದ್ದಾರೆ.