ಕರ್ನಾಟಕದ ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಮಂಡ್ಯದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದ ವ್ಯಾಪ್ತಿಯಲ್ಲಿ 1,600 ಟನ್ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಭಾರತೀಯ ಭೂ ವೈಜ್ಞಾನಿಕ ಸಮೀಕ್ಷೆ (ಜಿಎಸ್ಐ) ತಂಡವು ಶ್ರೀರಂಗಪಟ್ಟಣದ ಈ ಗ್ರಾಮದ ವ್ಯಾಪ್ತಿಯಲ್ಲಿ ಲೀಥಿಯಂ ಖನಿಜ ಸಂಪತ್ತು ಇರುವುದನ್ನು ಈ ಹಿಂದೆಯೇ ದೃಢಪಡಿಸಿದೆ.
ಈಗ ರಾಜ್ಯಸಭೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು, “ಪರಮಾಣು ಇಂಧನ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯ ಮರಳಗಾಲದಲ್ಲಿ ಬೃಹತ್ ಲೀಥಿಯಂ ನಿಕ್ಷೇಪ ಕಂಡು ಬಂದಿದೆ,” ಎಂದು ಸದನಕ್ಕೆ ಲಿಖಿತ ಉತ್ತರದಲ್ಲಿ ತಿಳಿಸಿದ್ದು, ಇಂಧನ ಸ್ವಾವಲಂಬನೆಯಲ್ಲಿ ಭಾರತಕ್ಕೆ ಇದು ದೊಡ್ಡ ಕೊಡುಗೆಯಾಗಲಿದೆ ಎಂದಿದ್ದಾರೆ.
ಕೇಂದ್ರದ ಪರಮಾಣು ಖನಿಜಗಳ ಪರಿಶೋಧನೆ ಹಾಗೂ ಸಂಶೋಧನಾ ನಿರ್ದೇಶನಾಲಯ ಕರ್ನಾಟಕದ ಹಲವು ಕಡೆ ಲೀಥಿಯಂ ನಿಕ್ಷೇಪ ಪತ್ತೆಗೆ ನಡೆಸಿದ ಸಮೀಕ್ಷೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದ ಅಪರೂಪದ ಖನಿಜ ಸಂಪತ್ತು ಪತ್ತೆಯಾಗಿದೆ. ಭವಿಷ್ಯದಲ್ಲಿ ಭಾರತದ ನವೀಕರಿಸಬಹುದಾದ ಇಂಧನ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಲಿದೆ,” ಎಂದು ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು.
ರಾಜ್ಯದ ಯಾದಗಿರಿಯಲ್ಲೂ ಲೀಥಿಯಂ ನಿಕ್ಷೇಪ ಪತ್ತೆ ಮಾಡಲು ಸಮೀಕ್ಷೆ ನಡೆಸಲಾಗಿದೆ. ಛತ್ತೀಸ್ಗಢದ ಕೊಬ್ರಾ, ರಾಜಸ್ಥಾನ, ಬಿಹಾರ, ಆಂಧ್ರ ಪ್ರದೇಶಗಳ ಹಲವು ಪ್ರದೇಶಗಳಲ್ಲೂ ಶೋಧನೆ ನಡೆಸಲಾಗಿದೆ. ಹಿಮಾಚಲ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಮಸಾನ್ಬಾಲ್ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪ ಪತ್ತೆ ಮಾಡಲಾಗಿದೆ. ಆದರೆ ಸದ್ಯಕ್ಕೆ ಹಿಮಾಚಲದಲ್ಲಿ ಯಾವುದೇ ಪರಮಾಣು ಇಂಧನ ಘಟಕ ಆರಂಭಿಸುವ ಉದ್ದೇಶ ಸರಕಾರದ ಮುಂದಿಲ್ಲ,” ಎಂದು ಸಚಿವರು ಹೇಳಿದರು.