ಬಳ್ಳಾರಿ: ಮಲೆನಾಡು ಸೇರಿ ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದ್ದು, ಹಂಪಿಯಲ್ಲೂ ಪ್ರವಾಹದ ಪರಿಸ್ಥಿತಿ ಎದುರಾಗಿದೆ.
ಜಲಾಶಯದಿಂದ ಈಗಾಗಲೇ ನದಿಗೆ 90 ಸಾವಿರ ಕ್ಯುಸೆಕ್ ನೀರು ಹರಿಸುತ್ತಿರುವುದರಿಂದ ನದಿ ತೀರದಲ್ಲಿರುವ ಹಂಪಿಯ ಹಲವು ಐತಿಹಾಸಿಕ ಸ್ಮಾರಕಗಳು ಮುಳುಗಡೆಯಾಗಿವೆ. ಧಾರ್ಮಿಕ ವಿಧಿವಿಧಾನ ಮಂಟಪ, ಪುರಂದರದಾಸರ ಮಂಟಪ, ಜನಿವಾರ ಮಂಟಪ, ಸ್ನಾನ ಘಟ್ಟಗಳು ಮುಳುಗಡೆಯಾಗಿವೆ.
105 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ ಇದೀಗ 102 ಟಿಎಂಸಿ ನೀರು ಸಂಗ್ರಹವಾಗಿದೆ. ಹೀಗಾಗಿ 30 ಕ್ರಸ್ಟ ಗೇಟ್ ಗಳನ್ನ ಓಪನ್ ಮಾಡಿ 90 ಸಾವಿರ ಕ್ಯುಸೆಕ್ ನೀರು ತುಂಗಭದ್ರಾ ನದಿಗೆ ಹರಿಸಲಾಗಿದೆ.
ಕಂಪ್ಲಿಯ ಸೇತುವೆ ಬಂದ್:
ತುಂಗಭದ್ರಾ ಜಲಾಶಯದಿಂದ ನದಿಗೆ 90 ಸಾವಿರ ಕ್ಯುಸೆಕ್ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣಕ್ಕೆ ಪ್ರವಾಹದ ಭೀತಿ ಎದುರಾಗಿದೆ. ಕಂಪ್ಲಿಯ ಸೇತುವೆಯ ಮೇಲೆ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಲಾಗಿದೆ.