ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ನಡುವಿನ ವಾಕ್ ಸಮರ ಮಿತಿ ಮೀರುತ್ತಿದ್ದು ಈ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ನಾಲಿಗೆ ಹರಿಬಿಟ್ಟಿರುವ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ವಿಧಾನಪರಿಷತ್ ಶಾಸಕರಾದ ಟಿ.ಎ.ಶರವಣ ಅವರು ಬೆಂಗಳೂರಿನ ಜೆಪಿ ಭವನದಲ್ಲಿ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ವಿರುದ್ಧಸುದ್ದಿಗೋಷ್ಠಿ ನಡೆಸಿ, ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್ ಅವರು ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಗೌರವ ತೋರಿಸುವಂತೆ ಮಾತನಾಡಿದ್ದನ್ನು ನಾನು ಖಂಡಿಸುತ್ತೇನೆ.
ಹೀಗೆ ನಮ್ಮ ಪಕ್ಷದ ನಾಯಕರಿಗೆ ಬಾಯಿಗೆ ಬಂದ ಹಾಗೆ ಮಾತನಾಡಬಾರದು, ಅತ್ಯಂತ ವಿಕೃತ ಹಾಗೂ ನೀಚ ಮನಸ್ಸುಳ್ಳವರು ಮಾತ್ರ ಹೀಗೆ ಮಾತನಾಡುವುದು ಅದೇ ರೀತಿ ನಮ್ಮ ಪಕ್ಷದ ಹಿರಿಯರನ್ನು ನಿಂದಿಸುತ್ತಿದ್ದಾರೆ ಎಂದು ಶಿವನಗೌಡ ನಾಯಕ್ ವಿರುದ್ಧ ಕಿಡಿ ಕಾರಿದರು.
ಆದರೆ ಜೆಡಿಎಸ್ ಪಕ್ಷ ತನ್ನ ಕಾರ್ಯ ಹಾಗೂ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಎತ್ತರಕ್ಕೆ ಏರುತ್ತಿದೆ. ಅದಕ್ಕೆ ಇದನ್ನು ಸಹಿಸಲಾಗದೇ ಹೀಗೆಲ್ಲಾ ನಾಲಗೆ ಹರಿಬಿಡುತ್ತಿದ್ದಾರೆ.
ನಮ್ಮ ಪಕ್ಷ ಹಾಗೂ ನಮ್ಮ ಪಕ್ಷದ ಹಿರಿಯರ ಬಗ್ಗೆ ಬಾಯಿಗೆ ಬಂದ ಹಾಗೇ ಮಾತಾಡೋದು ಬಿಡಬೇಕು ಎಂದು ಬಿಜೆಪಿ ಶಾಸಕನಿಗೆ ಎಚ್ಚರಿಕೆ ನೀಡಿದರು.