ಕೌಶಂಬಿ: ಕುಟುಂಬದಲ್ಲಿ ಸಂಭವಿಸುವ ಒಂದು ಸಾವು ಎಂತಹ ಧೈರ್ಯಶಾಲಿಗಳನ್ನೂ ಕಂಗೆಡಿಸುತ್ತದೆ. ಕೈಕಾಲುಗಳು ಅಲುಗಾಡದಷ್ಟು ಅಧೀರರನ್ನಾಗಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಆದರೂ ಕೆಲವೊಮ್ಮೆ ನಮ್ಮ ದುಃಖವನ್ನು ನಿಯಂತ್ರಿಸಿಕೊಂಡು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಆಂಬುಲೆನ್ಸ್ ಸಿಗದೆ, ವ್ಯಕ್ತಿಯೊಬ್ಬ ತನ್ನ ಸಹೋದರಿಯ ಮೃತದೇಹವನ್ನು ಬೈಕ್ನಲ್ಲಿ ಇರಿಸಿಕೊಂಡು ಹೋದ ಮನಕಲಕುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಸೋದರಿಯ ಶವವನ್ನು ಆಕೆಯ ಅಣ್ಣ, ಬೈಕ್ನಲ್ಲಿ ಇರಿಸಿಕೊಂಡು ತೆರಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಖ್ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಭರ್ವಾರಿ ಪಾಲಿಕೆಯ ಅಂಬೇಡ್ಕರ್ ನಗರದಲ್ಲಿ ಈ ಘಟನೆ ವರದಿಯಾಗಿದೆ.
ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಚಿಂತೆಗೊಳಗಾಗಿದ್ದ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮನೆಯಲ್ಲಿ ಏಕಾಂಗಿಯಾಗಿ ಇದ್ದ ಸಮಯದಲ್ಲಿ ಆಕೆ ಈ ದುಡುಕಿನ ನಿರ್ಧಾರ ಕೈಗೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪರೀಕ್ಷೆಗಳು ಮುಗಿದ ಬಳಿಕ ಬಾಲಕಿ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ತುಂಬಾ ಆತಂಕಕ್ಕೆ ಒಳಗಾದವಳಂತೆ ಕಂಡುಬಂದಿದ್ದಳು ಎಂದು ಕುಟುಂಬದವರು ಹೇಳಿದ್ದಾರೆ.
ಬಾಲಕಿ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಕೂಡಲೇ ಆಕೆಯನ್ನು ಮಂಝಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಕೆ ಆಗಲೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದರು. ಆಕೆಯ ಶವವನ್ನು ಅಲ್ಲಿಂದ ಮನೆಗೆ ತರಲು ಯಾವ ಆಂಬುಲೆನ್ಸ್ ಕೂಡ ಸಿಗಲಿಲ್ಲ. ಸಾಕಷ್ಟು ಪರದಾಟದ ಬಳಿಕ ಆಕೆಯ ಸಹೋದರ, ಸುಮಾರು 10 ಕಿಮೀ ದೂರದಲ್ಲಿನ ಮನೆಗೆ ಬೈಕ್ನಲ್ಲಿಯೇ ಮೃತದೇಹವನ್ನು ಸಾಗಿಸಲು ನಿರ್ಧರಿಸಿದ್ದ.