ಬೆಂಗಳೂರು ಇದು ಇಂದಿನ ಕಥೆಯಲ್ಲ, ಅಧಿಕಾರಿಗಳ ಬೇಜವಾಬ್ದಾರಿಗೆ ಬೆಂಗಳೂರಿನ ವಾಹನ ಸವಾರರು ಅಕ್ಷರಶಃ ಬೇಸತ್ತು ಹೋಗಿದ್ದಾರೆ.
ಹೌದು ಮರ್ರೆ ಕಾಮಗಾರಿ ಮಾಡ್ತೀವಿ ಅಂತ ಗುಂಡಿ ತೆಗೆಯೋದು, ಬಳಿಕ ಮುಚ್ಚದೇ ಸುಮ್ಮನಿರೋದು ಇದು BBMP-BWSSB ಅಧಿಕಾರಿಗಳ ಕಥೆ ಅಲ್ಲ ವ್ಯಥೆ.
ಸುಬ್ಬಯ್ಯ ಸರ್ಕಲ್ ಟೂ ಡಬಲ್ ರೋಡ್ ಪೆಟ್ರೋಲ್ ಬಂಕ್ ಮತ್ತು ಡಬ್ಬಲ್ ರೋಡ್ ಸಂಪೂರ್ಣ ಗುಂಡಿ ಮಯವಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡೋದು ನರಕದ ಅನುಭವ ಬರುತ್ತೆ. ಬಿಡಬ್ಲೂಎಸ್ಎಸ್ಬಿ ಒಳಚರಂಡಿ ಕಾಮಗಾರಿಗಾಗಿ ಗುಂಡಿ ತೆಗೆದು ಮುಚ್ಚದೆ ಬಿಟ್ಟಿದ್ದಾರೆ. ಮಳೆ ಬಂದ್ರೆ ಈ ದಾರಿಯಲ್ಲಿ ರೋಡ್ ಯಾವುದು ಗುಂಡಿ ಯಾವುದು ಅಂತ ಗೊತ್ತಾಗುವುದೆ ಇಲ್ಲ ಅಷ್ಟರಮಟ್ಟಿಗೆ ಅಧ್ವಾನವಾಗಿ ಹೋಗಿದೆ.
ರಸ್ತೆ ಗುಂಡಿ ವಿಚಾರ ಈಗ ಬಿಬಿಎಂಪಿಗೆ ಕಾಮನ್ ಅಗ್ಬಿಟ್ಟಿದೆ ಅನ್ಸುತ್ತೆ. ಯಾಕೆ ಈ ಮಾತುಗಳು ಹೇಳ್ತಿದ್ದೀವಿ ಅಂದ್ರೇ ಬಿಬಿಎಂಪಿ ಕೇಂದ್ರ ಕಚೇರಿಗೆ ಕೂಗಳತೆ ದೂರದಲ್ಲೇ ನರಕ ಯಾತ್ರೆ ಮಾಡಿಸೋ ರಸ್ತೆ ಇದೆ. ಅದೂ ಹಾರ್ಟ್ ಆಫ್ ದಿ ಸಿಟಿಯ ಪ್ರಮುಖ ರಸ್ತೆ ಸುಬ್ಬಯ್ಯ ರೋಡ್ ಡಬಲ್ ಜಂಕ್ಷನ್ ಸಂಪೂರ್ಣ ಗುಂಡಿ ಮಯವಾಗಿದೆ. ಈ ರಸ್ತೆಯಲ್ಲಿ ಸಂಚಾರ ಮಾಡೋದು ನರಕದ ಅನುಭವ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಇನ್ನು ಈ ರಸ್ತೆಯಲ್ಲಿ ಸಂಚಾರ ಮಾಡೋ ವಾಹನ ಸವಾರರು ಕೇವಲ ಬೈಗುಳವಲ್ಲ ಅಧಿಕಾರಿಗಳಿಗೆ ಹಿಡಿಶಾಪ ಹಾಕ್ತಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಇದೆ ದುಸ್ಥಿತಿಯಿದೆ. ಬಿಡಬ್ಲ್ಯುಎಸ್ಎಸ್ಬಿ ಯಾವುದೋ ಕಾಮಗಾರಿಗಾಗಿ ರಸ್ತೆಯುದ್ದಕ್ಕೂ ಅಗೆದು ಬೇಕಾಬಿಟ್ಟಿ ಮುಚ್ಚಿದ್ದಾರೆ. ಇದರಿಂದ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ. ಸಿಎಂ ಸಾಹೇಬ್ರೇ ಹಾಗೂ ಬೆಂಗಳೂರು ಸಚಿವರಾದ ಡಿಸಿಎಂ ಡಿ.ಕೆ ಶಿವಕುಮಾರ್ ಸಾಹೇಬ್ರೇ ದಯಮಾಡಿ ಈ ರಸ್ತೆಯಲ್ಲಿ ಒಂದೇ ಒಂದು ರೌಂಡ್ ಹಾಕಿ, ಈ ನರಕದ ಅನುಭವ ಪಡೆಯಿರಿ. ಆಗ ನಿಮ್ಗೆ ನಮ್ಮ ಸಂಕಷ್ಟ ಅರ್ಥವಾಗುತ್ತೆ. ಹೆಸರಿಗೆ ಹಾರ್ಟ್ ಆಫ್ ದಿ ಸಿಟಿ ರಸ್ತೆ ಎನ್ನಿಸಿಕೊಳ್ಳುವ ಡಬ್ಬಲ್ ರೋಡ್, ಅದ್ರೇ ಇಲ್ಲಿ ಸಂಚಾರ ಮಾಡಿದ್ರೇ ಇದ್ಯಾವ ಸೀಮೆಯ ರಸ್ತೆ ಅನ್ನಿಸುತ್ತೆ. ಈ ರಸ್ತೆಯಲ್ಲಿ ಯಾವುದೇ ವಾಹನ ಸವಾರರಾಗ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಗುಂಡಿ ಪಾಲಾಗೋದು ಪಕ್ಕಾ ಎಂದು ಆಟೋ ಚಾಲಕರೊಬ್ಬರು ಹೇಳಿದ್ದಾರೆ.