ಭಾರತೀಯ ಮೂಲದ ಸುಂದರ್ ಪಿಚೈ ಸಾರಥ್ಯದ ಗೂಗಲ್ ಸಂಸ್ಥೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಗಂಭೀರ ಆರೋಪ ಮಾಡಿದ್ದಾರೆ. ಈ ರೀತಿಯ ಕೃತ್ಯಗಳಿಂದ ಅವರು ಸಾಕಷ್ಟು ಸಮಸ್ಯೆ ಎದುರಿಸಬೇಕಾದೀತು ಎಂದೂ ಮಸ್ಕ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಆರೋಪಕ್ಕೆ ಉದಾಹರಣೆಯನ್ನೂ ನೀಡಿರುವ ಎಲಾನ್ ಮಸ್ಕ, ಗೂಗಲ್ ಸರ್ಚ್ನಲ್ಲಿ ‘ಪ್ರೆಸಿಡೆಟ್ ಡೊನಾಲ್ಡ್’ ಎಂದು ಟೈಪ್ ಮಾಡಿದರೆ ಸರ್ಚ್ ರಿಸಲ್ಟ್ನಲ್ಲಿ ‘ಪ್ರೆಸಿಡೆಂಟ್ ಡೊನಾಲ್ಡ್ ಡಕ್’ ಹಾಗೂ ‘ಪ್ರೆಸಿಡೆಂಟ್ ಡೊನಾಲ್ಡ್ ರೇಗನ್’ ಎಂದು ಬರುತ್ತಿದೆ. ಹಾಗಾದರೆ ಗೂಗಲ್ ಸಂಸ್ಥೆ ಅಮೆರಿಕದ ಮಾಜಿ ಅಧ್ಯಕ್ಷರ ಬಗ್ಗೆ ಗೂಗಲ್ ಸರ್ಚ್ ನಿಷೇಧ ಹೇರಿದೆಯಾ? ಎಂದು ಪ್ರಶ್ನಿಸಿರುವ ಎಲಾನ್ ಮಸ್ಕ್, ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಬಗ್ಗೆ ಗೂಗಲ್ ತಾರತಮ್ಯ ಮಾಡುತ್ತಿದೆ ಎಂದು ಆರೋಪಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ವಾವ್ ಗೂಗಲ್ ಸಂಸ್ಥೆಯು ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ಎಂಬ ಪದಗಳ ಹುಡುಕಾಟಕ್ಕೇ ಬ್ರೇಕ್ ಹಾಕಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಗೂಗಲ್ ಸಂಸ್ಥೆ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ ಎಂದು ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ಧಾರೆ.