ಪ್ಯಾರಿಸ್ ಒಲಿಂಪಿಕ್ಸ್ ಅಂಗಣದಲ್ಲಿ ಭಾರತೀಯರ ಭರವಸೆಯ ಭಾರ ಹೊತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ನಲ್ಲಿ ಮಿಂಚಿದ 22 ವರ್ಷದ ಮನು ಭಾಕರ್ ಶಾರ್ಪ್ ಶೂಟರ್ ಕಂಚಿನ ಪದಕ ಗೆದ್ದಿದ್ದಾರೆ. ಗನ್ ಸರಿ ಪಡಿಸಿಕೊಂಡು ಗುರಿ ಮೇಲೆ ಗುರಿಯಿಟ್ಟು ಸಕಲ ಪ್ರಯತ್ನ ನಡೆಸಿದ್ದರೂ ಫೈನಲ್ಗೆ ಅರ್ಹತೆ ಪಡೆಯಲು ಸ್ವಲ್ಪದರಲ್ಲೇ ವಿಫಲರಾದಗಾ ಕಣ್ಣೀರಲ್ಲೇ ಕೈ ತೊಳೆದಿದ್ದರು.
ಆದರೆ, ಈ ವೈಫಲ್ಯಗಳು ಮನು ಭಾಕರ್ ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ. ಇಂದು ಅವರು ಭಾರತಕ್ಕೆ ಕಂಚು ಗೆದ್ದು ಕೊಟ್ಟಿದ್ದಾರೆ.
2024ರ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಹೆಗ್ಗಳಿಕೆಗೂ ಪಾತ್ರರಾದರು. ಫೈನಲ್ನಲ್ಲಿ ಕೊರಿಯಾದ ಶೂಟರ್ಸ್ ನೂತನ ಒಲಿಂಪಿಕ್ಸ್ ದಾಖಲೆಗಳೊಂದಿಗೆ ಚಿನ್ನ ಮತ್ತು ಬೆಳ್ಳಿ ಗೆದ್ದರೆ, ವೈಯಕ್ತಿಕ ಶ್ರೇಷ್ಠ ಪ್ರದರ್ಶನ ತೋರಿದ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು.
ಮನು ಭಾಕರ್ ಹಿನ್ನೆಲೆ
ಶೂಟಿಂಗ್ ವಲಯದಲ್ಲಿ ಮಿಂಚಿನ ಸಂಚಲನವನ್ನೇ ತಂದಿರುವ ಮನು ಭಾಕರ್, ಕಿರಿಯ ವಯಸ್ಸಿನಲ್ಲೇ ಗುರಿಗಾರಿಕೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹರಿಯಾಣ ಮೂಲದವರಾದ ಮನು ಭಾಕರ್, ಟೀನೇಜರ್ ಆಗಿದ್ದ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಶೂಟಿಂಗ್ನಲ್ಲಿ ಭಾರಿ ಸದ್ದು ಮಾಡಿದವರು. ಭಾರತಕ್ಕೆ ಶೂಟಿಂಗ್ನಲ್ಲಿ ಮೊದಲ ಒಲಿಂಪಿಕ್ಸ್ ಪದಕ ಗೆದ್ದಾಗ ಮನು ಭಾಕರ್ ಕೆಲವೇ ತಿಂಗಳ ಹಸುಗೂಸಾಗಿದ್ದರು. ಈಗ ಭಾರತಕ್ಕೆ ಶೋಟಿಂಗ್ನಲ್ಲಿ ಪದಕ ಗೆದ್ದುಕೊಟ್ಟ ಮೊದಲ ಮಹಿಳಾ ಶೂಟರ್ ಎನಿಸಿಕೊಂಡಿದ್ದಾರೆ.
2018ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದು ಮೊದಲ ಬಾರಿ ಭಾರಿ ಸದ್ದು ಮಾಡಿದ ಮನು ಭಾಕರ್, ಬಳಿಕ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆ ಆಯೋಜನೆಯ ಶೂಟಿಂಗ್ ವಿಶ್ವಕಪ್ನಲ್ಲಿ ಚಿನ್ನ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಶೂಟರ್ ಎಂಬ ವಿಶ್ವ ದಾಖಲೆಯನ್ನೂ ಬರೆದರು.
ತಮ್ಮ 14ನೇ ವಯಸ್ಸಿನಲ್ಲೇ ಶೂಟಿಂಗ್ ಶುರು ಮಾಡಿದ ಮನು ಭಾಕರ್ ಕೆಲ ಸಮಯದಲ್ಲೇ ರಾಷ್ಟ್ರೀಯ ಶೂಟಿಂಗ್ ತಂಡದಲ್ಲಿ ಬೆಸ್ಟ್ ಶೂಟರ್ ಎನಿಸಿದ್ದರು. ಬಳಿಕ ಉನ್ನತ ಶಿಕ್ಷಣ ಸಲುವಾಗಿ ವಿದೇಶಕ್ಕೆ ತೆರಳಿದ್ದ ಕಾರಣ ಕೆಲ ಸಮಯ ಶೂಟಿಂಗ್ನಿಂದ ದೂರ ಉಳಿದಿದ್ದರು. ಅವರ ಕೋಚ್ ಜಸ್ಪಾಲ್ ರಾಣಾ ಅವರ ಮನವಿ ಮೇರೆಗೆ ಮರಳಿ ಶೂಟಿಂಗ್ ಅಖಾಡಕ್ಕೆ ಇಳಿದ ಮನು ಭಾಕರ್, 2018ರ ಕಾಮನ್ವೆಲ್ತ್ ಚಾಂಪಿಯನ್ ಎನಿಸಿಕೊಂಡರು. ಆದರೆ, 2021ರ ಟೋಕಿಯೋ ಒಲಿಂಪಿಕ್ಸ್ನಲ್ಲಿ ಎದುರಾದ ಬೇಸರ ಕಾರಣ ಶೂಟಿಂಗ್ ಬಿಡುವ ನಿರ್ಧಾರಕ್ಕೂ ಬಂದಿದ್ದರು. ಬಳಿಕ ಪ್ಯಾರಿಸ್ ಒಲಿಂಪಿಕ್ಸ್ ಕನಸು ಕಟ್ಟಿ ಈಗ ಪದಕ ಗೆದ್ದು ತೋರಿಸಿದ್ದಾರೆ. ಶೂಟಿಂಗ್ನಿಂದ ಕೆಲ ಸಮಯ ದೂರ ಉಳಿದಿದ್ದ ಸಂದರ್ಭದಲ್ಲಿ ಮನು ಭಾಕರ್ ಪಿಟೀಲು ಬಾರಿಸುವುದನ್ನೂ ಕಲಿತುಕೊಂಡಿದ್ದಾರೆ.
ಶೂಟಿಂಗ್ನಲ್ಲಿ ಮನು ಭಾಕರ್ ಸಾಧನೆ
ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ 9 ಚಿನ್ನದ ಪದಕ, 2 ಬೆಳ್ಳಿ ಮತ್ತು 2 ಕಂಚು.
ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ 2 ಚಿನ್ನ
2018ರ ಕಾಮನ್ವೆಲ್ತ್ ಚಾಂಪಿಯನ್ಷಿಪ್ನಲ್ಲಿ 1 ಚಿನ್ನ
2018ರ ಯೂತ್ ಒಲಿಂಪಿಕ್ಸ್ನಲ್ಲಿ ಗೋಲ್ಡ್ ಮೆಡಲ್
2022ರ ಏಷ್ಯನ್ ಗೇಮ್ಸ್ ಗೋಲ್ಡ್ ಮೆಡಲ್
2023ರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ
ಎನ್ಆರ್ಎಐ ಮತ್ತು ಸಾಯ್ಗೆ ಧನ್ಯವಾದಗಳು. ಕ್ರೀಡಾ ಸಚಿವಾಲಯ, ಕೋಚ್ ಜಸ್ಪಾಲ್ ರಾಣಾ, ಹರಿಯಾಣ ಸರ್ಕಾರ್ ಮತ್ತು ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ ನೀಡಿದ ಬೆಂಬಲಕ್ಕೆ ಧನ್ಯವಾದಗಳು. ಅಘಾದ ಪ್ರೀತಿ ಮತ್ತು ಬೆಂಬಲ ನೀಡಿದ ಪ್ರತಿಯೊಬ್ಬ ಭಾರತೀಯರಿಗೂ ಈ ಪದಕ ಅರ್ಪಿಸುತ್ತೇನೆ,” ಎಂದು ಮನು ಭಾಕರ್ ಟ್ವೀಟ್ ಮಾಡುವ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.