ಬೆಂಗಳೂರು: ಭ್ರಷ್ಟಾಚಾರ ಮಾಡದಿದ್ದರೂ ತನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಈ ಆರೋಗಳನ್ನು ವಿರೋಧಿಸಿ ಇಂದು ಮಾಜಿ ಸಚಿವ ಹಾಗು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿಯವರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವಾರದ ಹಿಂದೆ ಮುಖ್ಯಮಂತ್ರಿಗಳಿಗೆ ಒಂದು ಪತ್ರ ಬರೆದಿದ್ದೆ, ಸದನದ ಒಳಗೂ ಹಾಗು ಹೊರಗೂ ನನ್ನ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ಯಾವುದೇ ಖಾತೆ ನಿಭಾಯಿಸಿದರೂ ಒಂದು ರೂ. ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದರೇ ಸಿಬಿಐಗೆ ವಹಿಸಿ, ಇಲ್ಲದಿದ್ದರೇ ನಾನು ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದೆ. ಆದರೇ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಭಾನುವಾರ ಮತ್ತೊಂದು ಪತ್ರವನ್ನು ಬರೆದಿದ್ದೇನೆ ಎಂದರು.
ಮುಖ್ಯಮಂತ್ರಿಗಳ ಈ ಆರೋಪವನ್ನು ಸದನದ ಒಳಗೆ ನಿಂತು ನನ್ನನ್ನ ನಾನು ಸಮರ್ಥಿಸಿಕೊಳ್ಳೋಕೆ ಅವಕಾಶ ಇಲ್ಲ. ನಾನು ಸಂಸದನಾದ ಕಾರಣ ಇದು ಸಾಧ್ಯವಾಗಲಿಲ್ಲ, ನನ್ನ ಮೇಲೆ ಮಾಡಿರುವ ಆರೋಪವನ್ನ ಹಿಂಪಡೆಯಬೇಕು ಅಥವಾ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ಬಗ್ಗೆ ಯೋಚನೆ ಮಾಡಿ ತೀರ್ಮಾನಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.