ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಈ ವೇಳೆ ದರ್ಶನ್ ರನ್ನು ನೋಡಲು ಚಿತ್ರರಂಗದ ಸಾಕಷ್ಟು ಮಂದಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಹೋದ ಎಲ್ಲರಿಗೂ ದರ್ಶನ್ ರನ್ನು ನೋಡಲು ಸಾಧ್ಯವಾಗಿಲ್ಲ. ಆಯ್ದ ಕೆಲವರನ್ನಷ್ಟೇ ದರ್ಶನ್ ಭೇಟಿ ಮಾಡಿದ್ದಾರೆ. ಈ ಮಧ್ಯೆ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ದರ್ಶನ್ ರನ್ನು ನೋಡಲು ಹೋಗುವುದಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.
ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ನೀವು ದರ್ಶನ್ ಅನ್ನು ನೋಡಲು ಹೋಗುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಜ್ ಬಿ ಶೆಟ್ಟಿ, ‘ನಾನು ನನ್ನ ವೃತ್ತಿ ಜೀವನದಲ್ಲಿ ದರ್ಶನ್ ಅವರನ್ನು ವೇದಿಕೆಯೊಂದರಲ್ಲಿ ಕೇವಲ ಒಮ್ಮೆ ಮಾತ್ರ ಭೇಟಿ ಆಗಿದ್ದೇನೆ. ಅವರೊಂದಿಗೆ ಅಂಥಹಾ ಪರಿಚಯವೂ ಇಲ್ಲ. ಕೇವಲ ಒಮ್ಮೆ ಭೇಟಿ ಆಗಿರುವ ವ್ಯಕ್ತಿ ಈಗ ಜೈಲಿಗೆ ಹೋಗಿದ್ದಾರೆಂದರೆ ನಾನು ಏಕೆ ನೋಡಲು ಹೋಗಲಿ. ಕೇವಲ ಒಂದು ಬಾರಿ ಮಾತ್ರ ಭೇಟಿಯಾದ ವ್ಯಕ್ತಿ ಜೈಲಿಗೆ ಹೋದರೆ ನಾನು ಹೋಗಿ ಭೇಟಿ ಆಗಬೇಕ? ನಾನು ಯಾಕೆ ಹೋಗಬೇಕು ಎಂದು ನನಗೆ ಗೊತ್ತಿಲ್ಲ’ ಎಂದು ರಾಜ್ ಬಿ ಶೆಟ್ಟಿ ಮರುಪ್ರಶ್ನೆ ಹಾಕಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಗ್ಗೆಯೂ ಮಾತನಾಡಿರುವ ನಟ ರಾಜ್ ಬಿ ಶೆಟ್ಟಿ, ‘ಆ ರೀತಿಯ ಘಟನೆ ಆಗಬಾರದಿತ್ತು ಆಗಿ ಹೋಗಿದೆ. ಅದರ ಬಗ್ಗೆ ಮಾತನಾಡಿ ಹೆಚ್ಚು ಪ್ರಯೋಜನ ಇಲ್ಲ. ಒಂದು ಮುನ್ನೆಚ್ಚರಿಕೆ ಬೇಕು ಬಾಕಿ ನಟರಿಗೆ ಸಹ, ಯಾವುದೇ ರೀತಿ ಕಾನೂನನ್ನು ನಾವು ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ, ಹಾಗೆ ತೆಗೆದುಕೊಳ್ಳುವುದು ತಪ್ಪು ಎಂಬುದು ಎಲ್ಲರಿಗೂ ಅರಿವಾಗಬೇಕು. ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆ ಅನುಭವಿಸಲೇ ಬೇಕು. ಪೊಲೀಸರು ಆ ಪ್ರಕರಣವನ್ನು ಹ್ಯಾಂಡಲ್ ಮಾಡಿರುವ ರೀತಿ ಸಹ ಬಹಳ ಚೆನ್ನಾಗಿದೆ. ಶಕ್ತಿಶಾಲಿ, ಪ್ರಭಾವಶಾಲಿ ವ್ಯಕ್ತಿಗಳಿಗೆ ಶಿಕ್ಷೆ ಆಗಲ್ಲ ಎಂಬ ಅಭಿಪ್ರಾಯ ಜನರಲ್ಲಿ ಇದೆ. ಈಗ ದರ್ಶನ್ ಆರೋಪಿ ಸ್ಥಾನದಲ್ಲಿದ್ದಾರೆ. ಅವರು ಅಪರಾಧಿ ಆಗುತ್ತಾರಾ ಇಲ್ಲವಾ ನೋಡೋಣ’ ಎಂದಿದ್ದಾರೆ.