ಅಮೆರಿಕದ ಉತ್ತರ ಅರಿಝೋನಾ ರಾಜ್ಯದ ಪೊವೆಲ್ ಸರೋವರದಲ್ಲಿ ಪಾಂಟೂನ್ ದೋಣಿ ಮಗುಚಿಬ ಬಿದ್ದ ಪರಿಣಾಮ ಇಬ್ಬರು ಮಕ್ಕಳ ಸೇರಿ ಮೂವರು ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಾಂಟೂನ್ ಎಂಬುದು ಚಪ್ಪಟೆ ತಳದ ದೋಣಿಯಾಗಿದ್ದು ಸಾಮಾನ್ಯವಾಗಿ ಟೊಳ್ಳಾದ ಕೊಳವೆಗಳ ಸಹಾಯದಿಂದ ತೇಲುತ್ತದೆ. ವಿಸ್ತಾರವಾದ ಕೋಣೆಗಳು, ಸ್ಟ್ಯಾಂಡ್ ಅಪ್ ಬಾರ್ಗಳು, ಸನ್ಪ್ಯಾಡ್ ಗಳಿರುವ ವಿಸ್ತಾರವಾದ ಡೆಕ್ ಅನ್ನು ಈ ದೋಣಿಗಳು ಹೊಂದಿರುತ್ತವೆ.
ಖಾಸಗಿ ಒಡೆತನದ 25 ಅಡಿ ಉದ್ದದ ದೋಣಿ ಸರೋವರದ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿದೆ. ಅರಿಝೋನಾ – ಉತಾಹ್ ಗಡಿಯ ಸನಿಹದ ನವಾಜೊ ಕೊಳ್ಳದ ಬಳಿ ದುರಂತ ನಡೆದಿದೆ ಎಂದು ನ್ಯಾಷನಲ್ ಪಾರ್ಕ್ ಸರ್ವಿಸ್ ಅಧಿಕಾರಿಗಳು ಹೇಳಿದ್ದಾರೆ.
ತಕ್ಷಣ ರಕ್ಷಣಾ ತಂಡದ ದೋಣಿ ಸ್ಥಳಕ್ಕೆ ಧಾವಿಸಿದ್ದು ಮುಳುಗಿದ್ದ ದೋಣಿಯ ಒಂದು ಭಾಗದ ಮೇಲೆ ನೇತಾಡುತ್ತಿದ್ದ 11 ಪ್ರಯಾಣಿಕರನ್ನು ರಕ್ಷಿಸಿದ್ದು 72 ವರ್ಷದ ವ್ಯಕ್ತಿ ಹಾಗೂ 4 ವರ್ಷದ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದರಲ್ಲಿ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.