ಉತ್ತರ ಕೊರಿಯಾವು ಇಂದು ಸಮುದ್ರದ ಕಡೆಗೆ ಮತ್ತೊಂದು ಕ್ಷಿಪಣಿ ಹಾರಿಸಿದ್ದು ಈ ಮೂಲಕ ಶತ್ರುಗಳಿಗೆ ಭಯ ಹುಟ್ಟಿಸಲು ಮುಂದಾಗಿದೆ.
ಒಂದೆಡೆ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಮಿಲಿಟರಿ ಪಡೆಗಳು ಒಟ್ಟಾಗಿ ಸಮರಾಭ್ಯಾಸ ನಡೆಸುತ್ತಿದೆ, ಅದನ್ನು ಸಹಿಸಿಕೊಳ್ಳಲಾಗದ ಉತ್ತರ ಕೊರಿಯಾವು ಪದೇ ಪದೇ ಕ್ಷಿಪಣಿಗಳನ್ನು ಹಾರಿಸುತ್ತಿದೆ. ಭಾನುವಾರ ಉತ್ತರ ಕೊರಿಯಾವು ಕ್ಷಿಪಣಿಯ ಉಡಾವಣೆ ಮಾಡಿದೆ ಎಂದು ಜಪಾನ್ನ ರಕ್ಷಣಾ ಸಚಿವಾಲಯ ಹೇಳಿದೆ. ದಕ್ಷಿಣ ಕೊರಿಯಾದ ಯೋನ್ಹಾಪ್ ಸುದ್ದಿ ಸಂಸ್ಥೆ ದಕ್ಷಿಣದ ಮಿಲಿಟರಿಯನ್ನು ಉಲ್ಲೇಖಿಸಿ ಮಾತನಾಡಿ, ಉತ್ತರ ಕೊರಿಯಾ ತನ್ನ ಪೂರ್ವದ ಸಮುದ್ರದ ಕಡೆಗೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದೆ ಎಂದು ತಿಳಿಸಿದೆ.
ಈ ಉಡಾವಣೆ ದೃಢಪಟ್ಟರೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಮಿಟಿಲರಿ ಪಡೆಗಳ ಒಟ್ಟಿಗೆ ಸಮರಾಭ್ಯಾಸವನ್ನು ಆರಂಭಿಸಿದ ಬಳಿಕ ಇದು ಮೂರನೇ ಸುತ್ತಿನ ಕ್ಷಿಪಣಿ ಉಡಾವಣೆಯಾಗಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾಗಳು ತಮ್ಮ ತರಬೇತಿಯು ರಕ್ಷಣಾತ್ಮಕ ಸ್ವರೂಪದ್ದಾಗಿದೆ ಎಂದು ದೃಢವಾಗಿ ಹೇಳಿದ್ದರೂ, ಉತ್ತರವು ಡ್ರಿಲ್ಗಳನ್ನು ಆಕ್ರಮಣಕ್ಕೂ ಮುನ್ನ ನಡೆಸುವ ಅಭ್ಯಾಸವೆಂದು ಪರಿಗಣಿಸಲಾಗಿದೆ.
ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಇಂಜಿನಿಯರಿಂಗ್ನ ಟ್ಯಾಂಗ್ ಯುವಾನ್ ನೇತೃತ್ವದ ಸಂಶೋಧನಾ ತಂಡದ ಪ್ರಕಾರ, ಉತ್ತರ ಕೊರಿಯಾ ಕ್ಷಿಪಣಿಯು ಎರಡು ಹಂತದ ಪರಮಾಣು-ಸಾಮರ್ಥ್ಯದ ಅಸ್ತ್ರವಾಗಿದ್ದು, 13,000 ಕಿಮೀ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ತಲುಪುವ ಸಾಮರ್ಥ್ಯ ಹೊಂದಿದೆ. ಇದು ಇಡೀ ಅಮೆರಿಕವನ್ನು ನಾಶ ಮಾಡಲು ಸಾಕು ಎಂದು ಹೇಳಿದೆ.