ನವದೆಹಲಿ: ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮದ ಫೋಟೋ ಪ್ರದರ್ಶನ ಮಾಡಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು!
ಕೇಂದ್ರ ಬಜೆಟ್ಗೆ ಸಿದ್ದತೆ ನಡೆಯುವ ವೇಳೆ ಅಧಿಕಾರಿಗಳ ಜೊತೆ ಕೇಂದ್ರ ಹಣಕಾಸು ಸಚಿವರು ಸಂಪ್ರದಾಯದಂತೆ ಹಲ್ವಾ ಕಾರ್ಯಕ್ರಮ ಮಾಡುತ್ತಾರೆ.
ಬಜೆಟ್ ಸಿದ್ದತೆ ವೇಳೆ ಅದರ ಗೌಪ್ಯತೆ ಹಾಗೂ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಬಜೆಟ್ ಸಿದ್ದತಾ ಕಾರ್ಯದಲ್ಲಿ ತೊಡಗುವ ಅಧಿಕಾರಿಗಳು ಕೆಲ ದಿನಗಳ ಕಾಲ ಮನೆಗೆ ಹೋಗದೆ, ಯಾರದ್ದೇ ಸಂಪರ್ಕಕ್ಕೂ ಸಿಗದೆ ಕಚೇರಿಯಲ್ಲಿ ಇರುತ್ತಾರೆ. ಅವರ ಊಟೋಪಚಾರಗಳ ಸಿದ್ದತೆಯ ಆರಂಭಕ್ಕಾಗಿ ಸೂಚ್ಯವಾಗಿ ಹಲ್ವಾ ಕಾರ್ಯಕ್ರಮ ನಡೆಯುತ್ತದೆ.
ಈ ಕಾರ್ಯಕ್ರಮದ ಫೋಟೋವನ್ನು ಲೋಕಸಭಾ ಕಲಾಪದಲ್ಲಿ ಪ್ರದರ್ಶನ ಮಾಡಿದ ರಾಹುಲ್ ಗಾಂಧಿ, ಈ ಫೋಟೋವನ್ನು ಗಮನಿಸಿ. ಇದರಲ್ಲಿ ಇರುವ 20 ಅಧಿಕಾರಿಗಳ ಪೈಕಿ ಯಾರೊಬ್ಬರೂ ಹಿಂದುಳಿದ ವರ್ಗ, ದಲಿತ ಹಾಗೂ ಆದಿವಾಸಿ ಸಮುದಾಯಕ್ಕೆ ಸೇರಿದವರು ಇಲ್ಲ. ನಾನು ಬೇಕಿದ್ದರೆ ಅವರ ಹೆಸರುಗಳನ್ನೂ ಹೇಳಬಲ್ಲೆ ಎಂದರು. ಈ ವೇಳೆ ರಾಹುಲ್ ಗಾಂಧಿ ಅವರ ಮಾತಿನ ದಾಟಿಗೆ ನಿರ್ಮಲಾ ಸೀತಾರಾಮನ್ ಅವರು ಹಣೆ ಚಚ್ಚಿಕೊಂಡು, ತಮ್ಮ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕರು.
ಇತ್ತ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಮಾತ್ರ ಈ ರೀತಿ ಫೋಟೋ ಪ್ರದರ್ಶನ ಮಾಡುವುದು ಸಂಸತ್ನ ನಿಯಮಗಳಿಗೆ ಬಾಹಿರವಾದದ್ದು ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಈ ವಿಚಾರ ಸಂಬಂಧ ಲೋಕಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು.