ಅಮೆರಿಕದಲ್ಲಿ ಜನರ ಆವಾಸಸ್ಥಾನಗಳ ಸುತ್ತಮುತ್ತ ಕಂಡುಬರುವ ಆರು ಪ್ರಾಣಿಗಳಲ್ಲಿ ಕೋವಿಡ್-19ಗೆ ಕಾರಣವಾದ ಸಾರ್ಸ್-ಕೋವ್-2 ವೈರಸ್ ಪತ್ತೆಯಾಗಿದೆ. ಐದು ಪ್ರಭೇದಗಳಿಗೆ ಈ ಮೊದಲೇ ಸಾರ್ಸ್-ಕೋವ್-2 ವೈರಸ್ ಸೋಂಕು ತಗುಲಿತ್ತು ಎಂದು ಹೊಸ ಅಧ್ಯಯನ ತಿಳಿಸಿದೆ.
ಜಿಂಕೆ ಇಲಿಗಳು, ವರ್ಜೀನಿಯಾ ಒಪೊಸಮ್ಗಳು (ಇಲಿ ರೀತಿಯ ಪ್ರಾಣಿ), ರಕೂನ್ಗಳು (ನಾಯಿಯ ರೀತಿಯ ಪ್ರಾಣಿ), ನೆಲಹಾಗ್ಗಳು (ಅಳಿಲು ರೀತಿಯ ಪ್ರಾಣಿ), ಪೂರ್ವ ಕಾಟನ್ ಟೈಲ್ ಮೊಲಗಳು ಮತ್ತು ಪೂರ್ವ ಕೆಂಪು ಬಾವಲಿಗಳು ಈ ಆರು ಪ್ರಭೇದಗಳ ಪ್ರಾಣಿಗಳಲ್ಲಿ ಸಾರ್ಸ್-ಕೋವ್-2 ವೈರಸ್ ಪತ್ತೆಯಾಗಿದೆ.
ಒಂದು ಒಪೊಸಮ್ನಲ್ಲಿ ಕಂಡುಬಂದಿರುವ ವೈರಸ್ ಈ ಹಿಂದೆ ತಿಳಿಯದ ವೈರಲ್ ರೂಪಾಂತರಗಳನ್ನು ಹೊಂದಿದೆ ಮತ್ತು ಈ ವೈರಸ್ ಮಾನವರು ಮತ್ತು ಅವರ ರೋಗನಿರೋಧಕ ಪ್ರತಿಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ವರ್ಜೀನಿಯಾ ಟೆಕ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ, ಪ್ರಭೇದಗಳನ್ನು ಅವಲಂಬಿಸಿ ಸೋಂಕು ತಗಲುವ ಪ್ರಮಾಣ ಶೇಕಡಾ 40 ರಿಂದ 60 ರಷ್ಟಿದೆ.
ನೇಚರ್ ಕಮ್ಯುನಿಕೇಷನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜನರು ನಡೆದಾಡುವ ದಾರಿಗಳು ಮತ್ತು ಹೆಚ್ಚಿನ ದಟ್ಟಣೆಯ ಸಾರ್ವಜನಿಕ ಪ್ರದೇಶಗಳ ಬಳಿ ವಾಸಿಸುವ ಪ್ರಾಣಿಗಳಲ್ಲಿ ಸಾರ್ಸ್-ಕೋವ್-2 ಸೋಂಕು ಹೆಚ್ಚಾಗಿ ಕಂಡು ಬಂದಿದೆ. ಅಂದರೆ ಈ ಪ್ರಾಣಿಗಳಿಗೆ ಮಾನವರಿಂದಲೇ ಸೋಂಕು ತಗುಲಿದೆ ಎನ್ನಲಾಗುತ್ತಿದೆ.
ಆನುವಂಶಿಕ ಟ್ರ್ಯಾಕಿಂಗ್ನಲ್ಲಿ ವಿಶಿಷ್ಟ ವೈರಲ್ ರೂಪಾಂತರಗಳಿರುವುದು ಕಂಡು ಬಂದಿದ್ದು, ಇದು ಮಾನವರಲ್ಲಿನ ಕೋವಿಡ್ ಸೋಂಕಿನ ರೂಪಾಂತರಗಳಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ ಮತ್ತು ಇದು ಒಂದು ಪ್ರಭೇದದಿಂದ ಮತ್ತೊಂದು ಪ್ರಭೇದಕ್ಕೆ ವೈರಸ್ ವರ್ಗಾವಣೆಯಾಗಿರುವುದನ್ನು ಸೂಚಿಸುತ್ತದೆ.
“ಮನುಷ್ಯರು ಕಾಡು ಪ್ರಾಣಿಗಳೊಂದಿಗೆ ಹತ್ತಿರದಲ್ಲಿದ್ದಾಗ ವೈರಸ್ ಮನುಷ್ಯರಿಂದ ವನ್ಯಜೀವಿಗಳಿಗೆ ವರ್ಗಾವಣೆಯಾಗಬಹುದು” ಎಂದು ವರ್ಜೀನಿಯಾ ಟೆಕ್ನ ಸಹಾಯಕ ಪ್ರಾಧ್ಯಾಪಕ ಕಾರ್ಲಾ ಫಿಂಕಿಲ್ ಸ್ಟೈನ್ ಹೇಳಿದ್ದಾರೆ.