ಬೆಂಗಳೂರು: ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವ ಜವಬ್ದಾರಿ ಮಾಲೀಕರದ್ದಾಗಿದೆ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಅಲ್ಲದೆ, ಕೋರ್ಟ್ ರಸ್ತೆ ಅಪಘಾತ ನಡೆದ ಮುನ್ನವೇ ವಿಮೆ ನವೀಕರಣವಾಗಿದ್ದರೂ, ಘಟನೆ ನಡೆದ ಮರು ದಿನದಿಂದ ಅನ್ವಯವಾಗುವಂತಿದ್ದಲ್ಲಿ ವಿಮಾ ಕಂಪನಿಗೆ ಪರಿಹಾರ ನೀಡುವಂತೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ರಸ್ತೆ ಅಪಘಾತ ಪ್ರಕರಣದಲ್ಲಿ ವಾಹನದ ಮಾಲೀಕರು ಪರಿಹಾರ ನೀಡಬೇಕೆಂದು ವಿಚಾರಣಾ ಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ
ನ್ಯಾಯಮೂರ್ತಿ ಕೆ. ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ. ಅಡಿಗ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ವಾದ-ಪ್ರತಿವಾದ ಆಲಿಸಿದ ಬಳಿಕ ‘ಈ ಪ್ರಕರಣದಲ್ಲಿ ಘಟನೆ ನಡೆದ ಸಮಯಕ್ಕಿಂತ 5 ತಾಸು ಮುನ್ನವೇ ವಾಹನದ ವಿಮೆ ನವೀಕರಣ ಮಾಡಿಸಿದ್ದರೂ, ಘಟನೆ ನಡೆದ ಮರುದಿನದಿಂದ ಅನ್ವಯವಾಗಲಿದೆ. ಹಾಗಾಗಿ ಘಟನೆಯಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶನ ನೀಡಲಾಗುವುದಿಲ್ಲ’ ಎಂದು ಕೋರ್ಟ್ ಆದೇಶಿಸಿದೆ.