ನವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಆಡಳಿತಕ್ಕೆ ಬಂದು ಒಂದು ತಿಂಗಳು ಕಳೆಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್ ಕೂಡ ಮೈತ್ರಿ ಮಾಡಿಕೊಂಡ ಪರಿಣಾಮ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಕೇಂದ್ರ ಸಚಿವ ಸ್ಥಾನವನ್ನು ದಕ್ಕಿಸಿಕೊಂಡಿದ್ದಾರೆ. ಆದರೆ ಇದೀಗ ಅಚ್ಚರಿಯ ಸಂಗತಿಯೊಂದು ದಿಢೀರನೇ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗ್ತಿದೆ.
ಹೌದು.. ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿರುವ ಜೆಡಿಎಸ್ ನಾಯಕ, ಎಚ್ಡಿ ಕುಮಾರಸ್ವಾಮಿ ಇದೀಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕೇಂದ್ರದಲ್ಲಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದ ಒಂದೆ ತಿಂಗಳಲ್ಲಿ ಎನ್ಡಿಎ ಮೈತ್ರಿಯಲ್ಲಿ ಬಿರುಕು ಮೂಡಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪೆನ್ಡ್ರೈವ್ ಬೀದೀಲಿ ಹಂಚೋಕೆ ಯಾರು ಕಾರಣ ಎಂದು ಬಿಜೆಪಿಗರಿಗೆ ಪ್ರಶ್ನಿಸಿರುವ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ನನ್ನ ಕುಟುಂಬಕ್ಕೆ ವಿಷ ಹಾಕಿದವರನ್ನ ನನ್ನ ಜೊತೇಲಿ ಕೂರಿಸ್ತಾರೆ. ಈಗ ಪಾದಯಾತ್ರೆಗೆ ನಮ್ಮ ಬೆಂಬಲ ಕೇಳ್ತಾರಾ? ಯಾವುದೋ ಒಂದು ಪ್ರಕರಣ ಇಟ್ಕೊಂಡು ಪಾದಯಾತ್ರೆ ಮಾಡೋದು ಎಷ್ಚು ಸರಿ? ಜನರ ಭಾವನೆ, ನೋವಿಗೆ ಸ್ಪಂದಿಸಬೇಕಾಗಿದೆ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ ಎಂದು ಬಿಜೆಪಿ ಆಯೋಜಿಸಿರುವ ಪಾದಯಾತ್ರೆ ಬಗ್ಗೆ ಅಸಮಾಧಾನ ಹೊರ ಹಾಕಿದರು.