ಜೈಲೂಟ ಸೇರದ ಕಾರಣ ಮನೆ ಊಟ ಹಾಗೂ ಹಾಸಿಗೆ ಬೇಕು ಎಂದು ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಮನೆ ಊಟ ಬೇಕು ಎಂದು ದರ್ಶನ್ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಮನವಿ ಮಾಡಿದ್ದರು. ಆದರೆ ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಇದನ್ನು ದರ್ಶನ್ ಪರ ವಕೀಲರು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆದಿದೆ. 10 ದಿನಗಳೊಳಗೆ ಜೈಲು ಅಧಿಕಾರಿಗಳು ತೀರ್ಮಾನ ಕೈಗೊಂಡು ಕೋರ್ಟ್ಗೆ ತಿಳಿಸಬೇಕು ಎಂದಿರುವ ಕೋರ್ಟ್ ಆಗಸ್ಟ್ 20ಕ್ಕೆ ವಿಚಾರಣೆ ಮುಂದೂಡಿದೆ.
‘ದರ್ಶನ್ಗೆ ಬೆನ್ನು ನೋವಿದೆ, ಜ್ವರ ಇದೆ’ ಎಂದು ದರ್ಶನ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಾಡಿದರು. ‘ಅನಾರೋಗ್ಯ ತುಂಬಾ ಬಿಗಡಾಯಿಸಿದ್ದರೆ ಅದನ್ನು ಜೈಲು ವೈದ್ಯರು ಪರಿಗಣಿಸುತ್ತಾರೆ. ವೈದ್ಯರು ಏನು ಸೂಚಿಸುತ್ತಾರೋ ಅದನ್ನು ಜೈಲಿನಲ್ಲಿ ನೀಡುತ್ತಾರೆ. ಸೆಲೆಬ್ರಿಟಿ ಆದ ಮಾತ್ರಕ್ಕೆ ಬೇರೆ ಆಹಾರ ಕೇಳಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರನ್ನೊಳಗೊಂಡ ಏಕ ಸದಸ್ಯ ಪೀಠ ಹೇಳಿತು.
‘ದರ್ಶನ್ಗೆ ಪೌಷ್ಟಿಕ ಆಹಾರ ನೀಡಬೇಕೆಂದು ಜೈಲಿನ ವೈದ್ಯಾಧಿಕಾರಿಯೂ ಸಲಹೆ ನೀಡಿದ್ದಾರೆ’ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದರು. ಇದಕ್ಕೆ ಉತ್ತರಿಸಿದ ಜಡ್ಜ್ ‘ಸಾವಿರಾರು ವಿಚಾರಣಾಧೀನ ಖೈದಿಗಳಿಗೆ ಪೌಷ್ಟಿಕ ಆಹಾರದ ಅಗತ್ಯ ಇರಬಹುದು. ದರ್ಶನ್ಗೂ ಇತರೆ ವಿಚಾರಣಾಧೀನ ಕೈದಿಗಳಿಗೂ ವ್ಯತ್ಯಾಸವಿಲ್ಲ’ ಎಂದಿದ್ದಾರೆ.
‘ವಿಚಾರಣಾಧೀನ ಖೈದಿಗಳು ಖಾಸಗಿಯಾಗಿ ಆಹಾರ ತರಿಸಿಕೊಳ್ಳಬಹುದು. ಜೈಲು ಅಧಿನಿಯಮ ಸೆಕ್ಷನ್ 30ರ ಅಡಿ ಮನೆ ಊಟಕ್ಕೆ ಅವಕಾಶವಿದೆ. ಆದರೆ ಜೈಲು ಕೈಪಿಡಿ ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಅನುಮತಿ ನಿರಾಕರಿಸಿದೆ. ಜೈಲು ಕೈಪಿಡಿಗೆ ಕಾನೂನಿನ ಬೆಂಬಲವಿಲ್ಲ. ಕೈಪಿಡಿಯಲ್ಲಿರುವುದು ಕೇವಲ ಆಡಳಿತಾತ್ಮಕ ನಿಯಮಗಳಷ್ಟೇ’ ಎಂದು ಪ್ರಭುಲಿಂಗ್ ನಾವದಗಿ ವಾದ ಮಾಡಿದರು.
‘ದರ್ಶನ್ ಮನವಿ ಸಲ್ಲಿಸಿದರೆ ಕಾನೂನಿನ ಅನ್ವಯವೇ ಪರಿಗಣಿಸಲಾಗುವುದು’ ಎಂದು ಸರ್ಕಾರದ ಪರ ಎಸ್ ಪಿಪಿ ಬೆಳ್ಳಿಯಪ್ಪ ಹೇಳಿಕೆ ನೀಡಿದರು. ‘10 ದಿನಗಳೊಳಗೆ ಜೈಲು ಅಧಿಕಾರಿಗಳು ತೀರ್ಮಾನ ತೆಗೆದುಕೊಂಡು ಕೋರ್ಟ್ಗೆ ತಿಳಿಸಬೇಕು’ ಎಂದು ಕೋರ್ಟ್ ಸೂಚಿಸಿದೆ.
ಸರ್ಕಾರದ ಮುಖ್ಯ ಅಭಿಯೋಜಕ ಬೆಳ್ಳಿಯಪ್ಪಗೆ ಕೋರ್ಟ್ ಕೆಲ ಪ್ರಶ್ನೆಗಳನ್ನು ಕೇಳಿದೆ. ‘ರಾಗಿ ಮುದ್ದೆ ಗೋಡೆಗೆ ಹೊಡೆದರೆ ಹಿಂದಿರುಗುತ್ತದೆ ಎಂದು ಕೋರ್ಟ್ಗೆ ಖೈದಿಯೊಬ್ಬ ಅರ್ಜಿ ಸಲ್ಲಿಸಿದ್ದ. ನೀವು ಅಂತಹ ಆಹಾರ ನೀಡುತ್ತಿದ್ದೀರಾ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಬೆಳ್ಳಿಯಪ್ಪ, ‘ಜೈಲು ಕೈಪಿಡಿ ಪ್ರಕಾರವೇ ಆಹಾರ ನೀಡಲಾಗುತ್ತಿದೆ’ ಎಂದಿದ್ದಾರೆ.