ಕಾಂಗ್ರೆಸ್ ಸಾಂಪ್ರದಾಯಿಕ ಮುಸ್ಲಿಂ ಮತಬುಟ್ಟಿಗೆ ಕನ್ನ ಹಾಕಲು ಜೆಡಿಎಸ್ ಭರ್ಜರಿ ಪ್ಲ್ಯಾನ್ ರೂಪಿಸಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂಗೆ ದಳಪತಿಗಳು ಟಾಸ್ಕ್ ಕೊಟ್ಟಿದ್ದು, ಮುಸ್ಲಿಂ ಬಾಹುಲ್ಯದ ಕ್ಷೇತ್ರಗಳಲ್ಲಿ ಮತ ವಿಭಜನೆಗೆ ಜೆಡಿಎಸ್ ನಾನಾ ರೀತಿಯ ತಂತ್ರ ಪ್ರಯೋಗ ಮಾಡುತ್ತಿದೆ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಕಾಂಗ್ರೆಸ್ ಬಿಂಬಿಸುವ ಪ್ರಯತ್ನ ನಡೆಸುತ್ತಿತ್ತು. ಸ್ವತಃ ರಾಹುಲ್ ಗಾಂಧಿ ಕಳೆದ ಚುನಾವಣೆಯಲ್ಲಿ ಈ ಹೇಳಿಕೆ ನೀಡಿದ್ದರು. ಪರಿಣಾಮ ಮುಸ್ಲಿಂ ಮತಗಳು ಜೆಡಿಎಸ್ಗೆ ಕಡೆಗೆ ದೊಡ್ಡ ಪ್ರಮಾಣದಲ್ಲಿ ಹರಿದು ಹೋಗಿರಲಿಲ್ಲ. ಜೆಡಿಎಸ್ ನಾಯಕತ್ವದಲ್ಲಿ ಮುಸ್ಲಿಮರ ಹೆಸರು ಇಲ್ಲದೆ ಇರುವುದು ಕೂಡಾ ಇದಕ್ಕೆ ಒಂದು ಕಾರಣವಾಗಿತ್ತು.
ಆದರೆ ಈ ಬಾರಿ ದಳಪತಿಗಳು ಸಿದ್ದರಾಮಯ್ಯ ಸ್ನೇಹಿತ ಸಿಎಂ ಇಬ್ರಾಹಿಂ ಅವರನ್ನು ತಮ್ಮತ್ತ ಸೆಳೆಯಲು ಯಶಸ್ವಿಯಾಗಿದ್ದಾರೆ. ಸಿಎಂ ಇಬ್ರಾಹಿಂ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನೂ ನೀಡಿದ್ದಾರೆ. ಇದೀಗ ಸಿಎಂ ಇಬ್ರಾಹಿಂ ಕೂಡಾ ಸಕ್ರಿಯವಾಗಿ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದು, ತಮ್ಮ ಭಾಷಣದ ಮೂಲಕ ಮುಸ್ಲಿಂ ಮತದಾರರನ್ನು ಜೆಡಿಎಸ್ನತ್ತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ.
ಈ ನಡುವೆ ರಾಜ್ಯಸಭೆಯ ಮಾಜಿ ಸದಸ್ಯ ಉಬೇದುಲ್ಲಾ ಖಾನ್ ಆಜ್ಮಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿ ನೀಡಲಾಗಿದೆ. ಇವರಷ್ಟೇ ಅಲ್ಲದೆ ಮುಸ್ಲಿಮ್ ಮಹಿಳೆಯರೂ ಜೆಡಿಎಸ್ ವಕ್ತಾರರಾಗಿ ಗಮನ ಸೆಳೆಯುತ್ತಿದ್ದಾರೆ. ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಜೀರ್ ಚಿಕ್ಕನೇರಳೆ ಅವರಿಗೆ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಹುದ್ದೆಯನ್ನು ನೀಡಲಾಗಿದೆ. ಈ ಮೂಲಕ ಹಲವು ಮುಸ್ಲಿಂ ಮುಖಗಳು ಇದೀಗ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿವೆ.
ಟಾರ್ಗೆಟ್ ಕಾಂಗ್ರೆಸ್
ಮುಸ್ಲಿಂ ಮತಗಳು ನಮಗೇ ಬರುತ್ತದೆ ಎಂಬ ನಂಬಿಕೆಯಲ್ಲಿರುವ ಕಾಂಗ್ರೆಸ್ಗೆ ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ತನ್ನ ಸಾಂಪ್ರದಾಯಿಕ ಮತಬುಟ್ಟಿಗೆ ಕನ್ನ ಹಾಕುವ ಭೀತಿ ಎದುರಾಗಿದೆ. ಸಿಎಂ ಇಬ್ರಾಹಿಂ ಆದಿಯಾಗಿ ಮುಸ್ಲಿಂ ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಸ್ಲಿಮರನ್ನು ಕೇವಲ ಓಟ್ ಬ್ಯಾಂಕ್ ಆಗಿ ಮಾತ್ರ ಬಳಕೆ ಮಾಡಿಕೊಳ್ಳುತ್ತಿದೆ ಹೊರತು ಮುಸ್ಲಿಮರಿಗೆ ಯಾವ ಉಪಕಾರವನ್ನು ಮಾಡಿಲ್ಲ ಎಂದು ಬಿಂಬಿಸುತ್ತಿದೆ. ಜೊತೆಗೆ ಮುಸ್ಲಿಮರಿಗೆ ಶೇ.4ರಷ್ಟುಸಂವಿಧಾನದತ್ತವಾಗಿ ಮೀಸಲಾತಿ ನೀಡಿದ್ದು ದೇವೇಗೌಡರು. ಇದನ್ನು ನಮ್ಮ ಸಮಾಜ ಎಂದಿಗೂ ಮರೆಯಬಾರದು ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳುವ ಮೂಲಕ ಮುಸ್ಲಿಮರ ಒಲವನ್ನು ಗಳಿಸುವ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ
ಇನ್ನು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವುದರ ಜೊತೆಗೆ ಇತ್ತೀಚೆಗೆ ಬಿಜೆಪಿಯ ವಿರುದ್ಧವೇ ಹೆಚ್ಚು ತೀಕ್ಷ್ಣವಾಗಿ ದಾಳಿ ನಡೆಸುತ್ತಿದ್ದಾರೆ. ಬಿಜೆಪಿಯನ್ನು ಸೈದ್ಧಾಂತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಅದರಲ್ಲೂ ಉರಿಗೌಡ ನಂಜೇಗೌಡ ವಿಚಾರವಾಗಿ ಕಾಂಗ್ರೆಸ್ ನಾಯಕರಿಗಿಂತ ಎಚ್ಡಿಕೆ ಹೆಚ್ಚು ಧ್ವನಿ ಎತ್ತಿದ್ದಾರೆ. ಬಿಜೆಪಿ ಒಕ್ಕಲಿಗರನ್ನು ಅವಮಾನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದೊಂದು ಕಾಲ್ಪನಿಕ ಚಿತ್ರಣ ಎಂದು ಪದೇ ಪದೇ ಟ್ವೀಟ್ ಹಾಗೂ ಹೇಳಿಕೆಗಳ ಮೂಲಕ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಮುಸ್ಲಿಮರ ಅನುಮಾನ ದೂರ ಮಾಡುವ ಪ್ರಯತ್ನ
ಜೆಡಿಎಸ್ ಬಿಜೆಪಿಯ ಬಿ ಟೀಂ ಹಾಗೂ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಬಿಜೆಪಿಯ ಜೊತೆಗೆ ಕೈಜೋಡಿಸಲಿದೆ ಎಂದು ಕಾಂಗ್ರೆಸ್ ಬಿಂಬಿಸುವ ಪ್ರಯತ್ನ ನಡೆಸುತ್ತಿದೆ. ಅದರಲ್ಲೂ ಮುಸ್ಲಿಮರು ಜೆಡಿಎಸ್ಗೆ ಓಟ್ ಹಾಕಿದರೆ ಅದರಿಂದ ಬಿಜೆಪಿಗೆ ಲಾಭ ಎಂಬ ಅಭಿಪ್ರಾಯವನ್ನೂ ರೂಪಿಸುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಸಹಜವಾಗಿ ಇವೆಲ್ಲಾ ಬೆಳವಣಿಗೆಗಳಿಂದ ಜೆಡಿಎಸ್ ಕುರಿತಾಗಿ ಮುಸ್ಲಿಮರು ಅನುಮಾನದಿಂದಲೇ ನೋಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಜನರ ಅನುಮಾನವನ್ನು ದೂರ ಮಾಡುವ ಪ್ರಯತ್ನ ಜೆಡಿಎಸ್ ಮಾಡುತ್ತಿದೆ. ಸ್ವತಃ ಎಚ್ಡಿ ಕುಮಾರಸ್ವಾಮಿ ಒಂದು ತಂತ್ರವನ್ನು ಅನುಸರಿಸಿದರೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹಾಗೂ ಇತರ ಜೆಡಿಎಸ್ ಮುಸ್ಲಿಂ ನಾಯಕರು ತಮ್ಮದೇ ಆದ ರೀತಿಯಲ್ಲಿ ಮುಸ್ಲಿಮ್ ಮತದಾರರ ಒಲವು ಗಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಇವೆಲ್ಲವೂ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುವುದು ಸದ್ಯದ ಕುತೂಹಲ.