ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟನೆಯ 50ನೇ ಸಿನಿಮಾ ‘ಮಹಾರಾಜ’ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಕೋಟಿ ಕೋಟಿ ಲೂಟಿ ಮಾಡಿರುವ ಮಹಾರಾಜ ಸಿನಿಮಾ ಓಟಿಟಿಯಲ್ಲೂ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾ ಕುರಿತಂತೆ ಇದೀಗ ಒಂದೊಂದೇ ವಿಚಾರಗಳು ಹೊರಗೆ ಬರುತ್ತಿವೆ. ಇದೀಗ ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿ ಹೊರ ಬಿದ್ದಿದೆ.
‘ಮಹಾರಾಜ’ ಸಿನಿಮಾದಲ್ಲಿ ನಟಿಸಲು ವಿಜಯ್ ಸೇತುಪತಿ ಒಂದೇ ಒಂದು ರೂಪಾಯಿ ಕೂಡ ಸಂಭಾವನೆ ಪಡೆದುಕೊಂಡಿಲ್ಲವಂತೆ.
ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ‘ಮಹಾರಾಜ’ ಸಿನಿಮಾವು 20 ಕೋಟಿ ರೂ. ಬಜೆಟ್ನಲ್ಲಿ ತಯಾರಾಗಿತ್ತು. ತಾನು ಕೂಡ ಸಂಭಾವನೆ ಪಡೆದರೆ, ಬಜೆಟ್ ಇನ್ನಷ್ಟು ಹಿಗ್ಗುತ್ತದೆ ಎಂಬುದನ್ನು ಅರಿತ ನಟ ವಿಜಯ್ ಸೇತುಪತಿ ಫ್ರೀ ಕಾಲ್ಶೀಟ್ ನೀಡಿದ್ದರು. ಯಾಕೆಂದರೆ, ಇದು ಅವರ 50ನೇ ಸಿನಿಮಾ. ತಮ್ಮ ಮೈಲಿಗಲ್ಲಿನ ಸಿನಿಮಾದಲ್ಲಿ ಇಂತಹ ಕಥೆಯೇ ಇರಬೇಕು ಎಂಬುದು ವಿಜಯ್ ಸೇತುಪತಿ ಆಸೆ ಆಗಿತ್ತು. ಈ ಕಥೆಯನ್ನು ಬಿಟ್ಟುಕೊಡಬಾರದು ಎಂಬ ಉದ್ದೇಶದಿಂದ ಫ್ರೀ ಆಗಿ ನಟಿಸಿದ್ದಾರೆ ಎನ್ನಲಾಗಿದೆ.
ಹಾಗಂತ, ವಿಜಯ್ ಸೇತುಪತಿಗೆ ಈ ಸಿನಿಮಾದಿಂದ ದುಡ್ಡೇ ಸಿಕ್ಕಿಲ್ಲ ಎನ್ನುವಂತಿಲ್ಲ. ಯಾಕೆಂದರೆ, ಸಂಭಾವನೆ ಪಡೆಯದೇ ಸಿನಿಮಾವನ್ನು ಮುಗಿಸಿಕೊಟ್ಟಿದ್ದರು ವಿಜಯ್ ಸೇತುಪತಿ. ಇದೀಗ ‘ಮಹಾರಾಜ’ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ ದಾಖಲೆ ಪ್ರಮಾಣದ ಗಳಿಕೆ ಮಾಡಿದೆ. ಹಾಗಾಗಿ, ಚಿತ್ರದಿಂದ ಬಂದ ಲಾಭದಲ್ಲಿ ಒಂದು ಭಾಗವನ್ನು ವಿಜಯ್ ಸೇತುಪತಿಗೆ ಕೊಡಲಾಗುತ್ತಿದೆ. 20 ಕೋಟಿ ರೂ. ಬಜೆಟ್ನ ಈ ಸಿನಿಮಾವು ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿದೆ.
‘ಮಹಾರಾಜ’ ಸಿನಿಮಾದಲ್ಲಿ ನಟಿಸುವಾಗ ವಿಜಯ್ ಸೇತುಪತಿ ಒಂದು ಸೀನ್ನಲ್ಲಿ ಕಣ್ಣೀರಿಟ್ಟಿದ್ದರಂತೆ. ಅಷ್ಟೊಂದು ಎಮೋಷನಲ್ ಆಗಿ ಈ ಸಿನಿಮಾದ ಕಥೆ ಅವರನ್ನು ಕನೆಕ್ಟ್ ಆಗಿತ್ತು. “ಚಿತ್ರದಲ್ಲಿ ನಾನು ಪೊಲೀಸರಿಗೆ ಮೂರನೇ ಬಾರಿಗೆ ಕಥೆ ಹೇಳುವ ಒಂದು ದೃಶ್ಯವಿದೆ. ಮೊದಲೆರಡು ಬಾರಿ ಕಥೆ ಹೇಳುವ ಸೀನ್ಗಳಲ್ಲಿ ನಾನು ಕಂಟ್ರೋಲ್ ತಪ್ಪಲಿಲ್ಲ. ಆದರೆ ಮೂರನೇ ಬಾರಿಗೆ ಕಥೆ ಹೇಳುವ ಸೀನ್ನಲ್ಲಿ ನನ್ನ ಕಣ್ಣೀರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ನಿಜವಾಗಿಯೇ ನಾನು ಅತ್ತುಬಿಟ್ಟೆ” ಎಂದು ವಿಜಯ್ ಸೇತುಪತಿ ತಿಳಿಸಿದ್ದಾರೆ.