ಮಂಡ್ಯ ರಜೆ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ತಮ್ಮ ಮನೆಯ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಬಿದ್ದು ಸಾವಿಗೀಡಾಗಿರುವ ಘಟನೆ ಮಂಡ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಮದ ಸಿ.ಕೆ.ಸಂದೀಪ್ ಕುಮಾರ್ (38) ಮೃತಪಟ್ಟಿರುವ ಯೋಧ ಎನ್ನಲಾಗಿದೆ.
ಸಿ.ಕೆ. ಸಂದೀಪ್ ಕುಮಾರ್ (38) ಹರಿಯಾಣ ರಾಜ್ಯದ ಸಿಹಾರ್ ಎಂಬ ಗಡಿಭಾಗದಲ್ಲಿ 140 ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 10 ದಿನಗಳ ಹಿಂದೆಯಷ್ಟೇ ರಜೆಯ ಮೇಲೆ ಗ್ರಾಮಕ್ಕೆ ಬಂದಿದ್ದ ಸಂದೀಪ್ ಕುಮಾರ್ ಅವರು ರಾತ್ರಿ ತಮ್ಮ ಮನೆಯ ಮೆಟ್ಟಿಲಿನಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಕ್ಷಣವೇ ಕುಟುಂಬಸ್ಥರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇನ್ನು ಯೋಧ ಸಂದೀಪ್ ಕುಮಾರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಹಶೀಲ್ದಾರ್ ಸೋಮಶೇಖರ್ ತಿಳಿಸಿದರು.