ಬೆಂಗಳೂರು: ವಾಲ್ಮೀಕಿ ನಿಗಮ ಮತ್ತು ಮುಡಾ ಪ್ರಕರಣ ಮುಂದಿಟ್ಟುಕೊಂಡು ಮುಗಿ ಬಿದ್ದಿರುವ ಬಿಜೆಪಿ – ಜೆಡಿಎಸ್ಗೆ ಅವರ ಅವಧಿಯ ಹಗರಣ ಹೊರತೆಗೆದು ಪ್ರತಿಪಕ್ಷಗಳ ಬಣ್ಣ ಬಯಲು ಮಾಡುವಂತೆ ಸಿಎಂ, ಡಿಸಿಎಂಗೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಸಭೆಯಲ್ಲಿ ರಾಜ್ಯದ ವಿದ್ಯಮಾನಗಳ ಬಗ್ಗೆ ವಿವರಣೆ ಪಡೆದುಕೊಂಡಿರುವ ಅವರು, ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ.
ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಬಿಜೆಪಿಯ ಕಾರ್ಯಸೂಚಿಗೆ ಬಲಿಯಾಗಬಾರದು. ಹಾಗಾಗಿ ಕರ್ನಾಟಕದಲ್ಲಿ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಅಧಿಕಾರದಲ್ಲಿದ್ದಾಗ ನಡೆದ ಅಕ್ರಮಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು. ಅಗತ್ಯ ಕ್ರಮವನ್ನೂ ಕೈಗೊಳ್ಳಬೇಕು ಎಂಬ ನಿರ್ದೇಶನ ನೀಡಿದರು ಎನ್ನಲಾಗಿದೆ.
ಈ ನಡುವೆ ವಾಲ್ಮೀಕಿ ನಿಗಮ, ಮುಡಾ ಪ್ರಕರಣಗಳು ರಾಷ್ಟ್ರ ಮಟ್ಟದಲ್ಲಿ ಸದ್ದಾಗುವಂತೆ ಬಿಜೆಪಿ, ಜೆಡಿಎಸ್ ಮಾಡಿವೆ. ಇದು ರಾಜ್ಯದ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಮತ್ತು ಕಾಂಗ್ರೆಸ್ಗೆ ಕೆಟ್ಟ ಹೆಸರು ತರಲು ಮಾಡುತ್ತಿರುವ ಹುನ್ನಾರವಾಗಿದೆ. ಆದರೆ, ಪ್ರತಿಪಕ್ಷಗಳ ಉದ್ದೇಶ ಈಡೇರುವುದಿಲ್ಲ.
ಈ ಎರಡೂ ಪ್ರಕರಣಗಳಲ್ಲಿ ಕಾನೂನಾತ್ಮಕವಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ಸಮರ್ಥನೆಯನ್ನೂ ಸರಕಾರ ಮಾಡಿಕೊಂಡಿದೆ. ಹಾಗಾಗಿ ದಿಲ್ಲಿಯಲ್ಲೂ ಈ ವಿಚಾರದಲ್ಲಿ ಪಕ್ಷ ಒತ್ತಡಕ್ಕೆ ಒಳಗಾಗಬೇಕಿಲ್ಲ ಎಂದು ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟರು.