ಕಾರವಾರ/ನವದೆಹಲಿ: ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸತ್ನಲ್ಲಿ ಧ್ವನಿ ಎತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಭೂಕುಸಿತವಾಗಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಯೇ ಕಾರಣ.
ಶಿರೂರು ಭೂಕುಸಿತದಲ್ಲಿ ಮೃತರಾದವರಿಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಡಿ ಪರಿಹಾರ ನೀಡಬೇಕು.
NDRFನ ಮತ್ತೊಂದು ತಂಡವನ್ನು ಶಿರೂರಿಗೆ ಶೋಧ ಕಾರ್ಯ ನಡೆಸಲು ಕಳುಹಿಸಬೇಕು ಎಂದು ಒತ್ತಾಯಿಸಿದ್ದಾರೆ. ವಯನಾಡಿನಲ್ಲಿ ಆಗಿರುವಂತೆ ಶಿರೂರಿನಲ್ಲಿ ಸಹ ಗುಡ್ಡ ಕುಸಿತವಾಗಿದೆ. ಅಭಿವೃದ್ಧಿ ಆಗಬೇಕು. ಅಭಿವೃದ್ಧಿ ಮಾಡುವಾಗ ವೈಜ್ಞಾನಿಕ ಅಧ್ಯಯನದ ವರದಿ ಮೂಲಕ ಅಭಿವೃದ್ಧಿ ಮಾಡಬೇಕು. ಪಶ್ಚಿಮಘಟ್ಟ ಬಹಳ ಸೂಕ್ಷ್ಮ ಪ್ರದೇಶವಾಗಿ ರುವುದರಿಂದ ಅದರ ಕ್ಯಾರಿಂಗ್ ಕ್ಯಪಾಸಿಟಿ ಅಧ್ಯಯನ ಆಗುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿರುವ ಕೆಲಸ ಅವೈಜ್ಞಾನಿಕವಾಗಿದೆ. ಅವೈಜ್ಞಾನಿಕ ವಾಗಿರುವುದರಿಂದಲೇ ಗುಡ್ಡ ಕುಸಿದಿದೆ ಎಂಬುದಾಗಿ ಹೇಳಲಾಗುತ್ತಿದೆ ಎಂದು ಸಂಸತ್ನಲ್ಲಿ ಗಮನ ಸೆಳೆದಿದ್ದಾರೆ. ಮುಂದಿನ ದಿನಗಳಲ್ಲಿಯಾದರೂ ಕಾಮಗಾರಿ ಮಾಡುವಾಗ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಆಗಬೇಕು ಎಂದು ಸಂಸತ್ನಲ್ಲಿ ಕಾಗೇರಿ, ಜಿಲ್ಲೆಯ ಸಮಸ್ಯೆ ಕುರಿತು ಸಂಸತ್ ಗಮನಕ್ಕೆ ತಂದಿದ್ದಾರೆ.