ನವದೆಹಲಿ: ಮುಡಾ ಹಾಗೂ ವಾಲ್ಮೀಕಿ ನಿಗಮ ಹಗರಣಗಳು ರಾಜ್ಯದಲ್ಲಿ ದೊಡ್ಡ ರಾಜಕೀಯ ಹಲ್ಚಲ್ ಎಬ್ಬಿಸಿವೆ. ಅದರಲ್ಲೂ ಸಿಎಂ ತವರೂರಾದ ಮೈಸೂರಿನಲ್ಲಿಯೇ ಮುಡಾ ಹಗರಣ ನಡೆದಿದೆ ಅನ್ನೋ ಆರೋಪ ವಿಪಕ್ಷಗಳ ಕೈಗೆ ದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡಿರುವ ಬಿಜೆಪಿ ಈಗ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಸಜ್ಜಾಗಿದೆ.
ಎನ್ಡಿಎ ಮೈತ್ರಿ ಪಕ್ಷ ಜೆಡಿಎಸ್, ರಾಜ್ಯ ಬಿಜೆಪಿ ನಾಯಕರ ಪಾದಯಾತ್ರೆಯಿಂದ ಅಂತರ ಕಾಯ್ದುಕೊಂಡಿತ್ತು. ಆದ್ರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕುಮಾರಸ್ವಾಮಿಯವರ ಮನವೊಲಿಸುವುದಾಗಿ ಹೇಳಿದ್ದಾರೆ. ಮನವೊಲಿಸಲು ಮಾತುಕತೆಗಳು ಕೂಡ ನಡೆದಿವೆ. ಒಂದು ಹಂತದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪಾದಯಾತ್ರೆಯಲ್ಲಿ ಭಾಗಿಯಾಗಲು ಓಕೆ ಅಂದಿದ್ದಾರೆ. ಆದ್ರೆ ಒಂದು ಷರತ್ತನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ.
ಕುಮಾರಸ್ವಾಮಿ ಹಾಕಿದ ಕಂಡಿಷನ್ ಏನು..?
ಮುಡಾ ಹಗರಣ ವಿರೋಧಿಸಿ ಬಿಜೆಪಿ ಕೈಗೊಳ್ಳುತ್ತಿರುವ ಬೆಂಗಳೂರು ಮೈಸೂರು ಪಾದಯಾತ್ರೆಗೆ ಆರಂಭದಲ್ಲಿ ಕುಮಾರಸ್ವಾಮಿ ಬೆಂಬಲವಿಲ್ಲ ಎಂದಿದ್ದರು. ರಾಜ್ಯದಲ್ಲಿ ಅದನ್ನು ಬಿಟ್ಟು ಅನೇಕ ಸಮಸ್ಯೆಗಳಿವೆ. ಜೆಡಿಎಸ್ ಈ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಅಂತ ಸ್ಪಷ್ಟವಾಗಿಯೂ ಹೇಳಿದ್ರು. ಇದರ ನಡುವೆ ಜೆಡಿಎಸ್ ಪಾಲ್ಗೊಳ್ಳದಿದ್ರೂ ನಿಮ್ಮ ಪಾಡಿಗೆ ನೀವು ಪಾದಯಾತ್ರೆ ಮಾಡಿ ಎಂದು ಅಮಿತ್ ಶಾ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಸದ್ಯ ಕುಮಾರಸ್ವಾಮಿಯವರೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ಮನವೋಲಿಸಿದ್ದಾರೆ ಅನ್ನೋ ಸುದ್ದಿ ಬಂದಿದೆ. ಪಾದಯಾತ್ರೆಯಲ್ಲಿ ಭಾಗವಹಿಸಲು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ ಆದ್ರೆ ಒಂದು ಕಂಡಿಷನ್ ಹಾಕಿದ್ದಾರೆ. ಅದು ನಾನು ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಅಂದ್ರೆ ಆ ಪಾದಯಾತ್ರೆಯಲ್ಲಿ ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಭಾಗವಹಿಸುವಂತಿಲ್ಲ ಅನ್ನೋ ಕಂಡಿಷನ್ ಮುಂದಿಟ್ಟಿದ್ದಾರೆ. ಒಂದು ವೇಳೆ ಷರತ್ತಿಗೆ ಒಪ್ಪಿದರೆ ಮಾತ್ರ ನಾನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಪ್ರಹ್ಲಾದ್ ಜೋಶಿ ಎದುರು ಕಂಡಿಷನ್ ಇಟ್ಟಿದ್ದಾರೆ. ಕುಮಾರಸ್ವಾಮಿ ಕಂಡಿಷನ್ಗೆ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ಬಿಜೆಪಿ ನಾಯಕರು ಏನು ಹೇಳ್ತಾರೋ ಅನ್ನೊ ಕುತೂಹಲವೊಂದು ಈಗ ಸೃಷ್ಟಿಯಾಗಿದೆ.