ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಆಹಾರ ಸಚಿವ ಪ್ರಹ್ಲಾದ್ ಜೋಶಿ ಘೋಷಿಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿಕೊಡಲು ಕೇಂದ್ರ ಸಿದ್ಧವಿದೆ. ಮನವಿ ಬಂದರೆ ಹೆಚ್ಚುವರಿ ಅಕ್ಕಿ ಕೊಡಲಿದ್ದೇವೆ. ಕೆಜಿಗೆ 28ರೂ.ನಂತೆ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ. ಎಷ್ಟು ಬೇಕಾದರೂ ಅಕ್ಕಿಕೊಡಲಿದ್ದೇವೆ ಎಂದು ಹೇಳಿದ್ದಾರೆ. ಈ ಹಿಂದೆ ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸುತರಾಂ ಒಪ್ಪಿರಲಿಲ್ಲ. ಇರುವ ಸ್ಟಾಕನ್ನೆಲ್ಲ ರಾಜ್ಯಕ್ಕೆ ಮಾರಾಟ ಮಾಡಿ ಖಾಲಿ ಮಾಡಿದರೆ ತುರ್ತು ಸಂದರ್ಭಗಳಲ್ಲಿ ವಿತರಣೆ ಮಾಡಲು ಕಷ್ಟ ಎಂಬುದು ಕೇಂದ್ರದ ವಾದವಾಗಿತ್ತು.
ಅನ್ನಭಾಗ್ಯ ಯೋಜನೆಯಡಿ ಕರ್ನಾಟಕ ಸರ್ಕಾರದ ಪಾಲಿನ ಉಚಿತ 5 ಕೆಜಿ ಅಕ್ಕಿ ನೀಡಲು ಕೇಂದ್ರದಿಂದ ಅಕ್ಕಿ ದೊರೆಯುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರು ಆರೋಪಿಸುತ್ತಲೇ ಬಂದಿದ್ದಾರೆ. ದುಡ್ಡು ಕೊಟ್ಟರೂ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಬಡವರ ಅಕ್ಕಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ ಎಂಬ ಆರೋಪ ನಿರಂತರ ಕೇಳಿಬಂದಿತ್ತು. ಆದರೆ, ಕೇಂದ್ರ ಸರ್ಕಾರ ಬೇರೆಯದೇ ಕಾರಣ ನೀಡಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಇದೀಗ ಕೇಂದ್ರದಿಂದ ಅಕ್ಕಿ ದೊರೆತರೆ ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ಅಕ್ಕಿಯನ್ನೇ ವಿತರಿಸಬಹುದಾಗಿದೆ.