10 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಮಾದಕ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರು ಭಾರತೀಯ ಪ್ರಜೆಗಳನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
28 ವರ್ಷ ವಯಸ್ಸಿನ ಸಿಮ್ರನ್ಜಿತ್ ಸಿಂಗ್ ಹಾಗೂ 19 ವರ್ಷ ವಯಸ್ಸಿನ ಗುಸಿಮ್ರತ್ ಸಿಂಗ್ ಅವರನ್ನು ಮಾದಕ ವಸ್ತು ಸಾಗಟ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.
ಕ್ಯಾಲಿಫೋರ್ನಿಯಾ ರಾಜ್ಯದ ಫ್ರೆಸ್ನೋ ಪ್ರದೇಶದಲ್ಲಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ಮಾದಕ ವಸ್ತುಗಳನ್ನು ಹಂಚಿಕೆ ಮಾಡಲು ಇಲ್ಲಿಗೆ ತೆಗೆದಕೊಂಡು ಬಂದಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಆರೋಪಿಗಳ ಚಲನ ವಲನದ ಕುರಿತಾಗಿ ಖಚಿತ ಮಾಹಿತಿ ಸಿಕ್ಕ ಆಧಾರದ ಮೇಲೆ ಭದ್ರತಾ ಪಡೆಗಳು ಕ್ರಮ ಕೈಗೊಂಡಿವೆ.
ಇಬ್ಬರೂ ಆರೋಪಿಗಳನ್ನೂ ಬಂಧನ ಮಾಡಿದ ಬಳಿಕ ಬೋಸ್ಟನ್ ರಾಜ್ಯದ ಫೆಡರಲ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಇದೀಗ ನ್ಯಾಯಾಲಯ ಆರೋಪಿಗಳನ್ನ ಫೆಡರಲ್ ವಶಕ್ಕೆ ಒಪ್ಪಿಸಿದೆ. ಆರೋಪಿಗಳು ಟ್ರ್ಯಾಕ್ಟರ್ ಒಂದರ ಟ್ರೇಲರ್ನಲ್ಲಿ ಮಾದಕ ವಸ್ತುಗಳನ್ನು ಅಡಗಿಸಿಕೊಂಡು ಸಾಗಣೆ ಮಾಡುತ್ತಿದ್ದರು. ಮಾದಕ ವಸ್ತು ಕೊಕೇನ್ ಅನ್ನು ಇಟ್ಟಿಗೆಗಳ ರೂಪದಲ್ಲಿ ಟ್ರ್ಯಾಕ್ಟರ್ನ ಟ್ರೇಲರ್ ಒಳಗೆ ಅಡಗಿಸಿ ಇಟ್ಟಿದ್ದರು. ಕ್ಯಾಬ್ ರೀತಿ ಕಾಣುತ್ತಿದ್ದ ಈ ಟ್ರೇಲರ್ ಅನ್ನು ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಬರೋಬ್ಬರಿ 400 ಕೆಜಿ ತೂಕದ 10.5 ಮಿಲಿಯನ್ ಡಾಲರ್ ಮೌಲ್ಯದ ಕೊಕೇನ್ ಸಾಗಿಸುತ್ತಿರೋದು ದೃಢಪಟ್ಟಿತ್ತು.
ಈ ಕುರಿತು ಮಾಹಿತಿ ನೀಡಿರುವ ಅಮೆರಿಕ ಅಟಾರ್ನಿ ಜೋಶುವಾ ಎಸ್ ಲೆವಿ, ಭಾರೀ ಪ್ರಮಾಣದಲ್ಲಿ ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಈ ಪ್ರಕರಣ ತುಂಬಾನೇ ಅಪಾಯಕಾರಿ ಬೆಳವಣಿಗೆ ಎಂದಿದ್ದಾರೆ. ಆರೋಪಿಗಳು ಟ್ರ್ಯಾಕ್ಟರ್ ಮೂಲಕ ಗ್ರಾಮಾಂತರ ಭಾಗಗಳಲ್ಲಿ ಸಂಚರಿಸುತ್ತಾ ಮ್ಯಾಸಚೂಸೆಟ್ಸ್ ರಾಜ್ಯದ ಆಯಕಟ್ಟಿನ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನ ಹಂಚಲು ಮುಂದಾಗಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.
ಟ್ರ್ಯಾಕ್ಟರ್ನಲ್ಲಿ ಮಾದಕ ವಸ್ತು ಹಂಚಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಫ್ತಿಯಲ್ಲಿ ಅಧಿಕಾರಿಗಳು ಹೊಂಚು ಹಾಕಿ ಕಾಯುತ್ತಿದ್ದರು. ಈ ವೇಳೆ, ಜುಲೈ 29 ರ ರಾತ್ರಿ 10.15ಕ್ಕೆ ಟ್ರ್ಯಾಕ್ಟರ್ ಆಗಮಿಸಿತು. ಅದರ ಹಿಂಬದಿಯಲ್ಲಿದ್ದ ಟ್ರೇಲರ್ನಲ್ಲಿ ಮಾದಕ ವಸ್ತುಗಳನ್ನ ಸಂಗ್ರಹಿಸಿ ಇಡಲಾಗಿತ್ತು. ಟ್ರ್ಯಾಕ್ಟರ್ ಚಾಲಕ ಹಾಗೂ ಟ್ರೇಲರ್ನಲ್ಲಿದ್ದ ವ್ಯಕ್ತಿ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.