2024ರ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ತಾವು ಭಾರತೀಯ ಮೂಲದವರು ಎಂದು ಆರಂಭದಿಂದಲೂ ಬಿಂಬಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ತಾವು ಆಫ್ರಿಕಾ ಮೂಲದ ಕಪ್ಪು ಮಹಿಳೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ಭಾರತೀಯ ಮೂಲವನ್ನ ಮರೆ ಮಾಚುತ್ತಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಭಾರತೀಯ ಮೂಲದ ನಾಯಕ ವಿವೇಕ್ ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಅಮೆರಿಕದ ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಭಾರತೀಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತಿದ್ದರು. ತಾವು ಭಾರತೀಯ ಅಮೆರಿಕನ್ ಎಂದು ಹೇಳಿಕೊಳ್ಳುತ್ತಿದ್ದರು. ಕ್ಯಾಲಿಫೋರ್ನಿಯಾ ರಾಜ್ಯವನ್ನು ಪ್ರತಿನಿಧಿಸುವಾಗಲೂ ಕಮಲಾ ಹ್ಯಾರಿಸ್ ಅವರು ತಾವು ಭಾರತೀಯ ಮೂಲದ ಅಮೆರಿಕನ್ ಎಂದೇ ಹೇಳಿಕೊಳ್ಳುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅವರು ವರಸೆ ಬದಲಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಕಮಲಾ ಹ್ಯಾರಿಸ್ ತಮ್ಮನ್ನು ತಾವು ಆಫ್ರಿಕಾ ಮೂಲದ ಅಮೆರಿಕನ್ ಹಾಗೂ ಕಪ್ಪು ಮಹಿಳೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರ ಈ ನಡೆ ಅಮೆರಿಕದಲ್ಲಿ ಇರುವ ಭಾರತೀಯರಿಗೆ ಬೇಸರ ತರಿಸಿದೆ ಎಂದಿದ್ದಾರೆ.
ಈ ಕುರಿತಾಗಿ ಅಮೆರಿಕದ ಪ್ರತಿಷ್ಠಿತ ಫಾಕ್ಸ್ ನ್ಯೂಸ್ಗೆ ಸಂದರ್ಶನ ನೀಡಿರುವ ವಿವೇಕ್ ರಾಮಸ್ವಾಮಿ, ವೈಯಕ್ತಿಕ ಮಟ್ಟದಲ್ಲಿ ಹೇಳೋದಾದರೆ ನನ್ನ ಪೋಷಕರೂ ಕೂಡಾ ಭಾರತದಿಂದ ವಲಸೆ ಬಂದವರು. ಸಕ್ರಮ ವಲಸಿಗರಾಗಿ ನನ್ನ ಪೋಷಕರು ದಕ್ಷಿಣ ಭಾರತದಿಂದ ಅಮೆರಿಕಗೆ ವಲಸೆ ಬಂದಿದ್ದರು. ಹಾಗೆ ನೋಡಿದರೆ ಕಮಲಾ ಹ್ಯಾರಿಸ್ ಅವರ ತಾಯಿ ಕೂಡಾ ನನ್ನ ಪೋಷಕರು ಬಂದ ದಕ್ಷಿಣ ಭಾರತದಿಂದಲೇ ಅಮೆರಿಕಗೆ ವಲಸೆ ಬಂದವರು. ಇದು ವಾಸ್ತವ. ನಿಮಗೆ ಇಷ್ಟ ಇರಲಿ, ಇಲ್ಲದಿರಲಿ ಇದು ಸತ್ಯ. ಕಮಲಾ ಹ್ಯಾರಿಸ್ ಕೂಡಾ ತಾವು ಭಾರತೀಯ ಮೂಲದ ಅಮೆರಿಕನ್ ಎಂದೇ ಹೇಳುತ್ತಿದ್ದರು. ಆದರೆ ಇದೀಗ ಅವರು ತಮ್ಮನ್ನು ತಾವು ಕಪ್ಪು ಮಹಿಳೆ ಎನ್ನುತ್ತಿದ್ದಾರೆ. ಹೀಗಾಗಿ, ಕಮಲಾ ಹ್ಯಾರಿಸ್ ಅವರ ದಿಢೀರ್ ನಿಲುವು ಬದಲಾವಣೆಯಿಂದ ಭಾರತೀಯ ಮೂಲದ ಅಮೆರಿಕನ್ನರು ಬೇಸರಗೊಂಡಿದ್ದಾರೆ ಎಂದು ವಿವೇಕ್ ರಾಮಸ್ವಾಮಿ ಹೇಳಿದರು.