ದೇವರ ನಾಡು ಕೇರಳ ಅಕ್ಷರಶಃ ಸ್ಮಶಾನವಾಗಿದೆ. ಭೀಕರವಾಗಿ ಸುರಿದ ಮಳೆಗೆ ನಾಲ್ಕು ಊರುಗಳೇ ಕೊಚ್ಚಿ ಹೋಗಿವೆ. ಸದ್ಯ ವಯನಾಡಿನಲ್ಲಿ ಪರಿಹಾರ ಕಾರ್ಯಕ್ಕಾಗಿ ಖ್ಯಾತ ನಟರು ದೇಣಿಗೆಯನ್ನು ನೀಡಲಾರಂಭಿಸಿದ್ದಾರೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈಗಾಗಲೇ 260ಕ್ಕೂಕೊ ಹೆಚ್ಚು ಜನರು ಈ ದುರಂತದಲ್ಲಿ ಸಾವನ್ನಪ್ಪಿದ್ದು ಸಾಕಷ್ಟು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವವರ ರಕ್ಷಣಾ ಕಾರ್ಯಚರನೆ ಹಗಲು ರಾತ್ರಿ ಎನ್ನದೆ ಮುಂದುವರೆದಿದೆ.
ಈ ದುರಂತಹ ಸಂದರ್ಭದಲ್ಲಿ ಮಲಯಾಳಂ ಚಿತ್ರರಂಗವು ಒಟ್ಟಾಗಿ ನಿಂತುಕೊಂಡಿದೆ. ನಟ ಫಹಾದ್ ಫಾಸಿಲ್ ಮತ್ತು ನಜ್ರಿಯಾ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ಮಾಹಿತಿಯನ್ನು ಫಹಾದ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ರಕ್ಷಣಾ ಕಾರ್ಯಕರ್ತರೊಂದಿಗೆ ಸಂತ್ರಸ್ತ ಜನರಿಗೆ ಸಹಾಯ ಮಾಡುತ್ತಿರುವ ಜನರು ಮತ್ತು ಸರ್ಕಾರಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಫಹಾದ್ ಅಭಿನಂದಿಸಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ನಟರಾದ ಸೂರ್ಯ ಅವರ ಕುಟುಂಬದವರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾಗಲಿ ಎಂದು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಸೂರ್ಯ ಅವರ ಪತ್ನಿ ಜ್ಯೋತಿಕಾ, ಸಹೋದರ ಕಾರ್ತಿ ಅವರು ಈ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ ಅವರು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರೂಪಾಯಿ ನೀಡಿದ್ದಾರೆ. ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಅವರು 15 ಲಕ್ಷ ರೂಪಾಯಿ ನೀಡಿದ್ದಾರೆ. ಮಮ್ಮುಟ್ಟಿ ಅವರ ಚಾರಿಟೆಬಲ್ ಟ್ರಸ್ಟ್ನಿಂದಲೂ ಪರಿಹಾರ ಕಾರ್ಯ ಕೈಕೊಳ್ಳಲಾಗಿದೆ. ಅಗತ್ಯ ಇರುವವರ ಸಹಾಯಕ್ಕೆ ಟ್ರಸ್ಟ್ ಧಾವಿಸಿದೆ. ಆಹಾರ, ಔಷದಿ, ಬಟ್ಟೆ ಮುಂತಾದ ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ನೀಡಲಾಗುತ್ತಿದೆ.
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರು ವಯನಾಡು ಭೂಕುಸಿತದ ಸಂತ್ರಸ್ತಿಗೆ ನೆರವಾಗುವ ಉದ್ದೇಶದಿಂದ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಚಿತ್ರರಂಗದ ಅನೇಕರು ಸಹಾಯ ಹಸ್ತ ಚಾಚುತ್ತಿದ್ದಾರೆ. ನಟಿ ನಿಖಿಲಾ ವಿಮಲ್ ಅವರು ತಡರಾತ್ರಿ ಪರಿಹಾರ ಶಿಬಿರದಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳು ಈಗಾಗಲೇ ಗಮನ ಸೆಳೆದಿವೆ.