ಬಾಲಿವುಡ್ ನ ಖ್ಯಾತ ನಟಿ ಹಿನಾ ಖಾನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ವಿಷಯವನ್ನು ಸ್ವತಃ ನಟಿ ಕಳೆದ ಕೆಲ ದಿನಗಳ ಹಿಂದಷ್ಟೇ ತಿಳಿಸಿದ್ದರು. ತಮಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಆಗಿದೆ ಎಂಬ ವಿಷಯವನ್ನು ಹಿನಾ ಖಾನ್ ತಿಳಿಸಿದರು. ಈಗ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಕೂದಲು ಉದುರುತ್ತಿದೆ. ಆ ಕಾರಣದಿಂದ ಸಂಪೂರ್ಣ ತಲೆ ಬೋಳಿಸಿಕೊಂಡಿದ್ದಾರೆ.
ತಮಗೆ ಕ್ಯಾನ್ಸರ್ ಇದೆ ಎಂಬುದು ತಿಳಿದಾಗಿನಿಂದ ಹಿನಾ ಖಾನ್ ಅವರು ಅಭಿಮಾನಿಗಳ ಜೊತೆ ಎಲ್ಲ ವಿಷಯವನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕಾಯಿಲೆಗೆ ಅವರು ಹೆದರಿಲ್ಲ. ಬದಲಿಗೆ, ತುಂಬ ಧೈರ್ಯದಿಂದ ಇದನ್ನು ಎದುರಿಸಲು ಸಜ್ಜಾಗಿದ್ದಾರೆ. ಅದರ ಮೊದಲ ಹಂತ ಎಂಬಂತೆ ಅವರು ತಲೆ ಬೋಳಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುವಾಗ ಪ್ರತಿ ದಿನ ಕೂದಲು ಉದುರಲು ಆರಂಭ ಆಗುತ್ತದೆ. ಪ್ರತಿ ಬಾರಿ ತಲೆಗೆ ಕೈ ಹಾಕಿದಾದ ಕೂದಲು ಉದುರುತ್ತದೆ. ಅದನ್ನು ನೋಡಿದಾಗಲೆಲ್ಲ ಕಿರಿಕಿರಿ ಆಗುವುದು ಸಹಜ. ಅದರಲ್ಲೂ ಮಹಿಳೆಯರಿಗೆ ಈ ಪರಿ ಕೂದಲು ಉದುರಿದರೆ ಹೆಚ್ಚು ಬೇಸರ ಆಗುತ್ತದೆ. ಇದರಿಂದ ಒಮ್ಮೆಲೆ ಮುಕ್ತಿ ಪಡೆಯಲು ಹಿನಾ ಖಾನ್ ಅವರು ಪೂರ್ತಿ ತಲೆ ಬೋಳಿಸಿಕೊಂಡಿದ್ದಾರೆ. ಅಗತ್ಯ ಇರುವಾಗ ತಾವು ವಿಗ್ ಧರಿಸುವುದಾಗಿ ಅವರು ತಿಳಿಸಿದ್ದಾರೆ.
ತಾವು ತಲೆ ಬೋಳಿಸಿಕೊಂಡ ವಿಡಿಯೋವನ್ನು ಹಿನಾ ಖಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೈಹಿಕ ಅನಾರೋಗ್ಯವನ್ನು ಎದುರಿಸಬೇಕು ಎಂದರೆ ಮಾನಸಿಕವಾಗಿ ಗಟ್ಟಿಯಾಗಿ ಇರಬೇಕು ಎಂದು ಅವರು ಹೇಳಿದ್ದಾರೆ. ಅಲ್ಲದೇ, ತಮ್ಮ ಅಭಿಮಾನಿಗಳಿಗೂ ಧೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ.