ಬೆಂಗಳೂರು: 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತದಾರರ ಹೋಲೈಕೆಗೆ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಅದರ ಭಾಗವಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ, ಕ್ಷೇತ್ರವೊಂದರ ಸ್ವತಂತ್ರ್ಯ ಅಭ್ಯರ್ಥಿಯ ಭಾವಚಿತ್ರ ಹೊಂದಿದ್ದ ದಿನಸಿ ವಸ್ತುಗಳ ಬ್ಯಾಗ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಭಾವಚಿತ್ರ ಮುದ್ರಿಸಿರುವ ದಿನಸಿ ಕಿಟ್ ಇದಾಗಿದೆ ಎಂದು ತಿಳಿದುಬಂದಿದೆ. ಯುಗಾದಿ ಹಬ್ಬದ ಪ್ರಯುಕ್ತ ಜನರಿಗೆ ನೀಡಲೆಂದು ಸಿದ್ಧಪಡಿಸಿದ್ದ ಕಿಟ್ಗಳನ್ನು ಯಶವಂತಪುರದ ಆರ್ ಎಂ ಸಿ ಯಾರ್ಡ್ ಮಾರ್ಕೆಟ್ನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು.
ಈ ಬಗ್ಗೆ ಬಿಬಿಎಂಪಿಯ ಮಾರಪ್ಪನ ಪಾಳ್ಯ ವಾರ್ಡಿನ ಅಸಿಸ್ಟೆಂಟ್ ಇಂಜಿನಿಯರ್ಗೆ ಬಂದ ಮಾಹಿತಿಯ ಅನ್ವಯ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ಸುಮಾರು 415 ಗೋದಿ ಹಿಟ್ಟಿನ ಚೀಲಗಳು, 1,350 ಮೈದಾ ಹಿಟ್ಟಿನ ಚೀಲಗಳು, 200 ಕಡಲೆ ಹಿಟ್ಟಿನ ಚೀಲ, 700 ರವೆ ಚೀಲ, 1,010 ಬಾಕ್ಸ್ ಬೆಲ್ಲ, 32 ಬಾಕ್ಸ್ ಹಪ್ಪಳ, 1,950 ಉಪ್ಪಿನ ಚೀಲಗಳು ಪತ್ತೆಯಾಗಿದೆ. ಎಲ್ಲವನ್ನೂ ವಶಕ್ಕೆ ಪಡಿಸಿಕೊಳ್ಳಲಾಗಿದೆ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ತಿಳಿಸಿದ್ದಾರೆ.