ನವದೆಹಲಿ: ಕೇರಳದಲ್ಲಿ ಘನಘೋರ ದುರಂತವಾಗಿ ಆರು ದಿನಗಳೇ ಉರುಳಿ ಹೋಯ್ತು. ಇಷ್ಟಾದ್ರೂ ಅಲ್ಲಿ ನರಕಸದೃಶ್ಯವೇ ಕಾಣ್ತಿದೆ. ಕಲ್ಲುಬಂಡೆ, ಕೆಸರಿನ ಮಧ್ಯೆ, ಮರದ ಬುಡಗಳ ಕೆಳಗೆ ಶವಗಳೇ ಕಾಣ್ತಿವೆ. ಸಾವಿನ ಎದುರು ಹೋರಾಡಿ ಬದುಕಿ ಬಂದವರ ಮುಖದಲ್ಲಿ ಕರಾಳತೆಯ ಕರಿಛಾಯೆ ಇನ್ನೂ ಆವರಿಸಿದೆ.
ರಾಜ್ಯ ಸರಕಾರದ ಮಾಹಿತಿ ಪ್ರಕಾರ ಇನ್ನೂ 206 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದು ಬಂದಿದ್ದು, ಭೂಕುಸಿತ ಬಾಧಿತ ಪ್ರದೇಶದಲ್ಲಿ ಭಾರತೀಯ ಸೇನೆ, ಕೇರಳ ವಿಪತ್ತು ನಿರ್ವಹಣಾ ಪಡೆ, ತುರ್ತು ನಿರ್ವಹಣಾ ಘಟಕದ ಸಿಬ್ಬಂದಿ ಹಲವು ತಂಡಗಳಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಪ್ರಕೃತಿ ವಿಕೋಪ ಸನ್ನಿವೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ಪರಿಣತಿ ಪಡೆದ ಸ್ವಯಂ ಸೇವಕರು ಸಹ ಕಾಣೆಯಾದವರ ಹುಡುಕಾಟಕ್ಕೆ ಕೈಜೋಡಿಸಿದ್ದಾರೆ.
ಭೂಕುಸಿತ ಪ್ರದೇಶದಲ್ಲಿ ಕ್ಲಿಷ್ಟವಾಗಿರುವ ಶೋಧ ಕಾರ್ಯಾಚರಣೆಗೆ ಸೇನೆಯ ಉತ್ತರ ಕಮಾಂಡ್ ಪಡೆಯ ಕ್ಸೇವರ್ ರೆಡಾರ್, ದಿಲ್ಲಿಯ ತಿರಂಗಾ ಪರ್ವತಾರೋಹಿ ರಕ್ಷಣಾ ಸಂಘಟನೆಯ 4 ರೀಕೊ ರೆಡಾರ್ಗಳನ್ನು ಶನಿವಾರ ಏರ್ಲಿಫ್ಟ್ ಮಾಡಲಾಗಿದೆ. ಭಾನುವಾರ ವಯನಾಡು ತಲುಪಲಿರುವ ರೆಡಾರ್ಗಳ ಮೂಲಕ ಆಳವಾದ ಶೋಧಕಾರ್ಯ ಕೈಗೊಳ್ಳಲು ನಿರ್ಧರಿಸಲಾಗಿದೆ. ಮಣ್ಣಿನಲ್ಲಿ ಹೂತು ಹೋಗಿರುವ ಮೃತದೇಹಗಳ ಪತ್ತೆ ಮಾಡಲು ರೆಡಾರ್ಗಳು ಸಹಕಾರಿಯಾಗಲಿವೆ ಎನ್ನಲಾಗಿದೆ.
ಭೂಕುಸಿತ ಪ್ರದೇಶ ಮೇಪ್ಪಾಡಿ ಸಮೀಪದ ಚೂರಲ್ಮಲಾ, ಮುಂಡಕ್ಕೈ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿದ ಮಲಯಾಳಂ ಚಿತ್ರನಟ ಹಾಗೂ ಲೆಫ್ಟಿನೆಂಟ್ ಕರ್ನಲ್ ಮೋಹನ್ಲಾಲ್ ಅವರು ಪರಿಶೀಲನೆ ನಡೆಸಿದರು. ಪರಿಹಾರ ಕಾರ್ಯದಲ್ಲಿ ತೊಡಗಿರುವ 122 ಇನ್ಫೆಂಟ್ರಿ ಬೆಟಾಲಿಯನ್ನ ಲೆಫ್ಟಿನೆಂಟ್ ಕರ್ನಲ್ ಪದವಿ ಹೊಂದಿರುವ ಮೋಹನ್ಲಾಲ್ ಅವರು, ಸೇನೆ ಸಮವಸ್ತ್ರದಲ್ಲಿ ಮೆಪ್ಪಾಡಿಯ ಮೌಂಟ್ ತಾಬೋರ್ ಶಾಲೆಯಲ್ಲಿರುವ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.
ಬಳಿಕ ಚೂರಲ್ಮಲಾ ಮತ್ತು ಬೆಯ್ಲಿ ಸೇತುವೆ ದಾಟಿ ಮುಂಡಕ್ಕೈಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದರು. ಮುರಿದು ಬಿದ್ದ ಮನೆಗಳ ಅವಶೇಷಗಳ ನಡುವೆ ಸಾಗಿದ ನಟ ಮೋಹನ್ಲಾಲ್ ಅವರು, ಪುಂಜಿರಿಮಟ್ಟಂ ಭಾಗದಲ್ಲಿ ಪ್ರವಾಹದ ಹಾನಿಯನ್ನು ವೀಕ್ಷಿಸಿದರು. ಭೂ ಕುಸಿತದಲ್ಲಿ ಕೊಚ್ಚಿಕೊಂಡು ಹೋಗಿರುವ ಮುಂಡಕ್ಕೈ ಪ್ರದೇಶದ ಸರಕಾರಿ ಶಾಲೆಯನ್ನು ಪುನರ್ ನಿರ್ಮಾಣ ಮಾಡಿಕೊಡುವುದಾಗಿ ಮೋಹನ್ಲಾಲ್ ಭರವಸೆ ನೀಡಿದರು. ತಂದೆ, ತಾಯಿ ಹೆಸರಿನಲ್ಲಿರುವ ವಿಶ್ವಶಾಂತಿ ಫೌಂಡೇಷನ್ ವತಿಯಿಂದ ಮುಂಡಕ್ಕೈ ಗ್ರಾಮದ ಶಾಲೆಯ ಪುನರ್ ನಿಮಾರ್ಣಕ್ಕೆ 3 ಕೋಟಿ ರೂ. ಹಣ ನೀಡುವುದಾಗಿ ಮೋಹನ್ಲಾಲ್ ಘೋಷಣೆ ಮಾಡಿದರು.