ಸಿನಿಮಾಗಳ ಜೊತೆ ಜೊತೆಗೆ ತಮ್ಮ ವೈಯಕ್ತಿಕ ಹೇಳಿಕೆಗಳ ಮೂಲಕವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವರ್ಮಾ ತಾನು ನೋಡಿದ ಸಿನಿಮಾಗಳಲ್ಲಿ ‘ದಿ ಕೇರಳ ಸ್ಟೋರಿ’ ಬೆಸ್ಟ್ ಎಂದಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನು ತಿಳಿಸಿದ್ದಾರೆ.
‘ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ನನಗೆ ಬಹಳ ಖುಷಿ ಇದೆ. ಸಾಕಷ್ಟು ವರ್ಷಗಳಿಂದ ಈಚೆಗೆ ನಾನು ನೋಡಿ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು. ಸಿನಿಮಾ ವೀಕ್ಷಿಸಿದ ಬಳಿಕ ನಾನು ನಿರ್ದೇಶಕರು, ನಿರ್ಮಾಪಕರು ಹಾಗೂ ನಟಿ ಅದಾ ಶರ್ಮಾ ಜೊತೆ ಮಾತನಾಡಿದೆ. ಆದರೆ ಅದೇ ತಂಡದವರು ಮಾಡಿದ ಇನ್ನೊಂದು ಸಿನಿಮಾ ಬಿಡುಗಡೆ ಆಗಿ ಹೋಯಿತು. ನನಗೆ ಅದರ ಬಗ್ಗೆ ಗೊತ್ತೇ ಆಗಲಿಲ್ಲ. ಎಲ್ಲರೂ ಆ ಸಿನಿಮಾವನ್ನು ನಿರ್ಲಕ್ಷಿಸಿದರು. ಇದನ್ನು ನಾವು ವಿವರಿಸುವುದು ಹೇಗೆ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಹಲವು ದಿನಗಳ ಕಾಲ ಪ್ರದರ್ಶನಗೊಂಡ ‘ದಿ ಕೇರಳ ಸ್ಟೋರಿ’ ಸಿನಿಮಾ ಅಂದಾಜು 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಇಂಥ ಸಿನಿಮಾಗಳು ಗೆಲ್ಲುವುದು ಅಪಾಯಕಾರಿ ಟ್ರೆಂಡ್ ಎಂದು ಬಾಲಿವುಡ್ನ ಹಿರಿಯ ನಟ ನಸೀರುದ್ದೀನ್ ಶಾ ಹೇಳಿದ್ದರು. ಅಂಥ ಸಿನಿಮಾ ರಾಮ್ ಗೋಪಾಲ್ ವರ್ಮಾ ಅವರಿಗೆ ತುಂಬ ಇಷ್ಟ ಆಗಿದೆ. ಜನರು ಸಿನಿಮಾಗಳನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಬಗ್ಗೆ ಆರ್ಜಿವಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎ.ಆರ್. ರೆಹಮಾನ್ ಅವರು ಹೇಳಿದ್ದ ವಿಷಯವನ್ನು ರಾಮ್ ಗೋಪಾಲ್ ವರ್ಮಾ ನೆನಪು ಮಾಡಿಕೊಂಡಿದ್ದಾರೆ. ‘ತುಂಬ ದಿನಗಳ ಹಿಂದೆ ಎ.ಆರ್. ರೆಹಮಾನ್ ನನಗೆ ಈ ಮಾತನ್ನು ಹೇಳಿದ್ದರು. ವರ್ಷದ ಅತಿ ದೊಡ್ಡ ಹಿಟ್ ಆಗಲಿದೆ ಎಂದುಕೊಂಡು ಮಾಡಿದ ಟ್ಯೂನ್ ಅನ್ನು ಜನರು ಕಡೆಗಣಿಸುತ್ತಾರೆ. ಅದನ್ನು ಜನರು ಕೆಟ್ಟದ್ದು ಎಂದು ಕೂಡ ಹೇಳಲ್ಲ. ಅಂಥದ್ದೊಂದು ಹಾಡು ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಇದಕ್ಕೆಲ್ಲ ಹಲವು ಉದಾಹರಣೆ ಇದೆ. ನನ್ನದೇ ತೆಗೆದುಕೊಳ್ಳಿ. ನನ್ನ ಎಲ್ಲ ಹಿಟ್ ಸಿನಿಮಾಗಳು ಆಕಸ್ಮಿಕವಾಗಿ ಆಗಿದ್ದು. ಫ್ಲಾಪ್ಗಳೆಲ್ಲ ಉದ್ದೇಶಪೂರಕ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.