ಕಳೆದ ನಾಲ್ಕೈದು ದಿನಗಳ ಹಿಂದೆ ಸಂಭವಿಸಿದ ಕೇರಳವ ವಯನಾಡು ಗುಡ್ಡು ಕುಸಿತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಅಲ್ಲಿನ ಭೀಕರ ದೃಶ್ಯಗಳನ್ನು ಕಂಡು ಕಣ್ಣೀರುಡುತ್ತಿದ್ದಾರೆ. ಮನೆ, ಮಠ, ಮಕ್ಕಳನ್ನು ಕಳೆದುಕೊಂಡು ಸಾಕಷ್ಟು ಮಂದಿ ಭೀದಿಗೆ ಬಂದು ನಿಂತಿದ್ದಾರೆ.ಇವರ ಸಹಾಯಕ್ಕೆ ಅನೇಕ ನಟ, ನಟಿಯರು ಮುಂದಾಗಿದ್ದು ತಮ್ಮಕೈಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಸಂತ್ರಸ್ತರಿಗೆ 25 ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಲ್ಲು ಅರ್ಜುನ್ 25 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಅವರು ನೀಡಿರುವ 25 ಲಕ್ಷ ರೂಪಾಯಿಯಿಂದ ಸಂತ್ರಸ್ತರಿಗೆ ವಿವಿಧ ರೀತಿಯ ಸೌಕರ್ಯಗಳನ್ನು ನೀಡಲು ಸಹಾಯ ಆಗುತ್ತದೆ. ಔಷಧಿ, ಆಹಾರ, ಬಟ್ಟೆ ಮುಂತಾದ ವಸ್ತುಗಳನ್ನು ನೀಡಲಾಗುವುದು. ಅಲ್ಲದೇ, ರಕ್ಷಣಾ ಕಾರ್ಯಾಚರಣೆಗೂ ಈ ದೇಣಿಗೆಯಿಂದ ಅನುಕೂಲ ಆಗಲಿದೆ.
ಈ ಬಾರಿ ಸುರಿಯುತ್ತಿರುವ ಭೀಕರ ಮಳೆಗೆ ಹಲವು ಕಡೆಗಳಲ್ಲಿ ದುರಂತ ಸಂಭವಿಸಿದೆ. ಪ್ರವಾಹ ಮತ್ತು ಭೂಕುಸಿತಕ್ಕೆ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಆ ಪೈಕಿ ಹೆಚ್ಚು ಆಘಾತ ಸೃಷ್ಟಿಸಿದ್ದು ವಯನಾಡು ಭೂಕುಸಿತ. ಕೇರಳದ ವಯನಾಡಿನಲ್ಲಿ ಜುಲೈ 30ರಂದು ಭೂಕುಸಿತ ಉಂಟಾಯಿತು. ಇದರಿಂದ ನೂರಾರು ಕುಟುಂಬಗಳು ನಾಶವಾಗಿವೆ. 200ಕ್ಕೂ ಅಧಿಕ ಜನರು ನಾಪತ್ತೆ ಆಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಚಿತ್ರರಂಗದ ಅನೇಕ ಕಲಾವಿಧರು ದೇಣಿಗೆ ನೀಡುತ್ತಿದ್ದಾರೆ. ಚಿರಂಜೀವಿ, ರಾಮ್ ಚರಣ್ 1 ಕೋಟಿ ರೂಪಾಯಿಮ ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ನೀಡಿದ್ದಾರೆ. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮೋಹನ್ಲಾಲ್ ಅವರು 3 ಕೋಟಿ ರೂಪಾಯಿ ನೀಡುತ್ತಿದ್ದಾರೆ. ಮಮ್ಮುಟ್ಟಿ ಮತ್ತು ದುಲ್ಖರ್ ಸಲ್ಮಾನ್ ಅವರು ಜೊತೆಯಾಗಿ 35 ಲಕ್ಷ ರೂಪಾಯಿ ನೀಡಿದ್ದಾರೆ.
ಫಹಾದ್ ಫಾಸಿಲ್, ನಜ್ರಿಯಾ ನಜೀಮ್, ಸೂರ್ಯ, ಕಾರ್ತಿ, ಜ್ಯೋತಿಕಾ, ಚಿಯಾನ್ ವಿಕ್ರಮ್ ಸೇರಿದಂತೆ ಅನೇಕರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.