ಬೆಂಗಳೂರು: ರಾಜಭವನವನ್ನು ಅತಿ ಹೆಚ್ಚು ದುರುಪಯೋಗ ಪಡೆಸಿಕೊಂಡಿರುವ ಶ್ರೇಯಸ್ಸು ಕಾಂಗ್ರೆಸ್ಸಿಗಿದೆ. ದೇಶದಲ್ಲಿ ಸುಮಾರು 56ಕ್ಕಿಂತಲೂ ಹೆಚ್ಚುಬಾರಿ ರಾಜಭವನವನ್ನು ದುರುಪಯೋಗ ಪಡೆಸಿಕೊಂಡು ಸರ್ಕಾರಗಳನ್ನು ಉರುಳಿಸಿದ್ದು ಕಾಂಗ್ರೆಸ್ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ರಾಜ್ಯಭವನವನ್ನು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ನಡೆಸಿದ್ದಾರೆ ಎಂಬ ಕಾಂಗ್ರೆಸ್ನ ಆರೋಪಕ್ಕೆ ಪ್ರತಿಕ್ರಿಯಿಸಿದರು. ಈ ವೇಳೆ ಅತಿ ಹೆಚ್ಚು ವಿವಾದಾತ್ಮಕ ಹಾಗೂ ಪ್ರಶ್ನಾರ್ಹ ರಾಜ್ಯಪಾಲರಾಗಿದ್ದ ಗ್ರೇಟ್ ಹಂಸರಾಜ ಭಾರದ್ವಾಜ್ ಅವರು ನಮ್ಮ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಏನೂ ಪ್ರಕರಣ ಇಲ್ಲದೇ ಅವರ ವಿರುದ್ಧ ತನಿಖೆಗೆ ಆದೇಶ ನೀಡಿದ್ದರು. ಈಗ ಆ ಪ್ರಕರಣ ಬಿದ್ದುಹೋಗಿದೆ. ಕಾಂಗ್ರೆಸ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳುತ್ತದೆಯೇ ಎಂದು ಪ್ರಶ್ನಿಸಿದರು. ಇನ್ನೂ ಅವರೇನು ನಮಗೆ ಪಾಠ ಹೇಳುವುದು ಎಂದು ತಿರುಗೇಟು ಕೊಟ್ಟರು.
ಇನ್ನೂ ಹಿಂದಿನ ಸರ್ಕಾರದಲ್ಲಿ ನಡೆದ ಹಗರಣಗಳನ್ನು ಬಹಿರಂಗಪಡಿಸುವುದಾಗಿ ಕಾಂಗ್ರೆಸ್ಸಿಗರು ಹೇಳುತ್ತಿರುವ ಕುರಿತು, ಇವರದೇ ಸರ್ಕಾರ ಇದೆ. ಯಾವುದೇ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.