ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಒಂದಲ್ಲ ಒಂದು ಕಾರಣಕ್ಕೆ ತಮ್ಮ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಲೆ ಇರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ವರ್ಮಾ ಮಲಯಾಳಂ ಚಿತ್ರರಂಗದ ಬಗ್ಗೆ ಮೊದಲು ಜನರಿಗೆ ಇದ್ದ ಭಾವನೆ ಬೇರೆ. ಮಲ್ಲು ಸಿನಿಮಾಗಳು ಎಂದರೆ ಪಡ್ಡೆಗಳು ಕಣ್ಣರಳಿಸುತ್ತಿದ್ದರು. ಆದರೆ, ಮಲಯಾಳಂ ಚಿತ್ರರಂಗ ಇತ್ತೀಚೆಗೆ ದೊಡ್ಡ ಯಶಸ್ಸು ಕಂಡಿದೆ. ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬುದನ್ನು ಇವರಿಂದ ನೋಡಿ ಕಲಿಯಬೇಕಾಗಿದೆ. ಈ ವರ್ಷ ಮಲಯಾಳಂನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಗೆದ್ದಿವೆ ಎಂದು ಹೇಳಿದ್ದಾರೆ.
ಈ ವರ್ಷ ರಿಲೀಸ್ ಆದ ಪ್ರೇಮುಲು, ಭ್ರಮಯುಗಂ, ಆವೇಶಂ, ಆಡು ಜೀವಿತಂ, ಫ್ಯಾಮಿಲಿ, ಮಂಜುಮ್ಮೇಲ್ ಬಾಯ್ಸ್ ಸೇರಿ ಅನೇಕ ಸಿನಿಮಾಗಳು ಜನ ಮೆಚ್ಚುಗೆ ಪಡೆದಿವೆ. ಈ ಯಶಸ್ಸನ್ನು ನೋಡಿ ಅನೇಕರಿಗೆ ಅಚ್ಚರಿ ಆಗಿದೆ. ಇದೀಗ ಮಲಯಾಳಂ ಚಿತ್ರರಂಗವನ್ನು ರಾಮ್ ಗೋಪಾಲ್ ವರ್ಮಾ ಹಾಡಿ ಹೊಗಳಿದ್ದಾರೆ.
‘ಕೆಲವು ಚಿತ್ರಗಳು ಒಂದರ ನಂತರ ಒಂದರಂತೆ ಬಂದು ಎಲ್ಲವನ್ನೂ ಬದಲಾಯಿಸಿದೆ. ಮಲಯಾಳಂ ಸಿನಿಮಾ ಎಂದರೆ ನೀಲಿ ಚಿತ್ರ ಎಂದು ತಿಳಿದ ಕಾಲವೊಂದಿತ್ತು. ಹಿಂದೆ, ನಾನು ವಿಜಯವಾಡದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗ ನಾವು ಮಲಯಾಳಂ ಚಲನಚಿತ್ರಗಳನ್ನು ನೋಡುತ್ತಿರಲಿಲ್ಲ. ಏಕೆಂದರೆ ಅವರು ಅಲ್ಲಿ ಬರುವುದೆಲ್ಲ ಅದೇ ರೀತಿಯ (ನೀಲಿ ಚಿತ್ರ) ಸಿನಿಮಾಗಳು ಎನ್ನವು ಅಭಿಪ್ರಾಯ ನಮ್ಮದಾಗಿತ್ತು. ಮಲಯಾಳಂ ಇಂಡಸ್ಟ್ರಿಯಿಂದ ಅತ್ಯುತ್ತಮ ಚಿತ್ರಗಳು ಬರುತ್ತಿವೆ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೇವೆ. ಆ ಸಮಯದಲ್ಲಿ ಅಂತಹ ಒಳ್ಳೆಯ ಚಿತ್ರಗಳು ಇರಲಿಲ್ಲವೆಂದಲ್ಲ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.