ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಶೇಖ್ ಹಸೀನಾ ಅವರಿಗೆ ರಾಜೀನಾಮೆ ನೀಡಲು ಬಾಂಗ್ಲಾದೇಶ ಸೇನೆ 45 ನಿಮಿಷಗಳ ಕಾಲಾವಕಾಶ ನೀಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ‘ಟೈಮ್ಸ್ ನೌ’ ವರದಿ ಮಾಡಿದೆ.
ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಅಸಹಕಾರ ಚಳವಳಿಯ ಮೊದಲ ದಿನವಾದ ಭಾನುವಾರ, ಪ್ರತಿಭಟನಕಾರರು ಹಾಗೂ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು, ಸುಮಾರು 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಅಸಹಕಾರ ಚಳವಳಿ ನಡೆಸುತ್ತಿರುವವರಿಗೆ ಅವಾಮಿ ಲೀಗ್, ಛಾತ್ರ ಲೀಗ್ ಮತ್ತು ಜುಬೊ ಲೀಗ್ ಕಾರ್ಯಕರ್ತರಿಂದ ಭಾನುವಾರ ಬೆಳಿಗ್ಗೆ ಪ್ರತಿರೋಧ ಎದುರಾದಾಗ ಘರ್ಷಣೆ ಉಂಟಾಗಿತ್ತು. ದೇಶದ 13 ಜಿಲ್ಲೆಗಳಲ್ಲಿ ಘರ್ಷಣೆ ಉಂಟಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಅನಿರ್ದಿಷ್ಟ ಅವಧಿಗೆ ದೇಶದಾದ್ಯಂತ ಕರ್ಫ್ಯೂ ವಿಧಿಸಲು ಗೃಹ ಸಚಿವಾಲಯ ತೀರ್ಮಾನಿಸಿತ್ತು. ಫೇಸ್ಬುಕ್, ಮೆಸೆಂಜರ್, ವಾಟ್ಸ್ಆಯಪ್ ಮತ್ತು ಇನ್ಸ್ಟಾಗ್ರಾಂ ಸೇವೆಗಳನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶಿಸಿತ್ತು. 4ಜಿ ಮೊಬೈಲ್ ಇಂಟರ್ನೆಟ್ ಸೇವೆಗಳ ಸ್ಥಗಿತಕ್ಕೂ ಆದೇಶಿಸಲಾಗಿದೆ.