ಕಳೆದ ಕೆಲ ದಿನಗಳಿಂದ ಬಾಂಗ್ಲಾ ದೇಶ ಹೊತ್ತಿ ಉರಿಯುತ್ತಿದೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ಸಾಕಷ್ಟು ಮಂದಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದರು. ಕೊನೆಗೂ ಪ್ರತಿಭಟನೆಗೆ ಮಣಿದ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಆಗಮಿಸಿದ್ದಾರೆ. ಈ ವೇಳೆ ಪ್ರಧಾನಿ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರು ಹುಚ್ಚಾಟ ಮಾಡಿದ್ದಾರೆ.
ಭಾರತಕ್ಕೆ ಆಗಮಿಸಿದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂದು ವಿರೋಧಿ ದಂಗೆ ಆರಂಭವಾಗಿದೆ. ನಾಲ್ಕು ಹಿಂದು ದೇವಾಲಯಗಳನ್ನು ಮೂಲಭೂತವಾದಿಗಳು ಧ್ವಂಸಗೊಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿರುವ ನಾಲ್ಕು ಇಸ್ಕಾನ್ ಹಾಗೂ ಕಾಳಿ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕಾಳಿ ದೇವಾಲಯಕ್ಕೆ ಬೆಂಕಿ ಹಚ್ಚಿದ ಇಸ್ಲಾಮಿಕ್ ಮೂಲಭೂತವಾದಿಗಳು ತಮ್ಮ ಮನಸ್ಥಿತಿ ಪ್ರದರ್ಶಿಸಿದ್ದಾರೆ. ಆ ಮೂಲಕ ಬಾಂಗ್ಲಾದೇಶದ ಪ್ರತಿಭಟನೆಯನ್ನು ಹಿಂದು ವಿರೋಧಿ ಪ್ರತಿಭಟನೆಯನ್ನಾಗಿ ಬದಲಿಸಿದ್ದಾರೆ.
ಅಷ್ಟೇ ಅಲ್ಲ, ರಂಗ್ಪುರ ಸಿಟಿ ಕಾರ್ಪೊರೇಷನ್ನ ಹಿಂದು ಕೌನ್ಸಿರ್ ಹರಧನ್ ರಾಯ್ ಹರ ಎಂಬುವರನ್ನು ಉದ್ರಿಕ್ತರು ಕೊಂದು ಹಾಕಿದ್ದಾರೆ. ಇದೇ ಪಟ್ಟಣದ ಮತ್ತೊಬ್ಬ ಹಿಂದು ಕೌನ್ಸಿಲರ್ ಕಾಜಲ್ ರಾಯ್ ಎಂಬವರನ್ನೂ ಕೊಲೆ ಮಾಡಿದ್ದಾರೆ. ಅಲ್ಲದೆ, ಭಾರತೀಯ ಕಲ್ಚುರಲ್ ಸೆಂಟರ್ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಕಟ್ಟಡಕ್ಕೆ ಹಾನಿ ಮಾಡಿದ್ದಾರೆ.
ಬಾಂಗ್ಲಾದೇಶದಲ್ಲಿ ಭಾರಿ ಅರಾಜಕತೆ ಸೃಷ್ಟಿಯಾಗಿ, ಗಲಭೆಗಳು ಆರಂಭವಾದ ಹಿನ್ನೆಲೆಯಲ್ಲಿ ಕೋಲ್ಕೊತಾದಿಂದ ಢಾಕಾಗೆ ತೆರಳುವ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹೇಗೆಯೇ, ಬಾಂಗ್ಲಾದೇಶಕ್ಕೆ ತೆರಳುವ ಏರ್ ಇಂಡಿಯಾ ವಿಮಾನಗಳ ಹಾರಾಟವನ್ನು ಕೂಡ ಸ್ಥಗಿತಗೊಳಿಸಲಾಗಿದೆ. ಭಾರತೀಯರು ಮುಂದಿನ ಸೂಚನೆ ಮೇರೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬಾರದು. ಬಾಂಗ್ಲಾದೇಶದಲ್ಲಿರುವ ಭಾರತೀಯರು, ವಿದ್ಯಾರ್ಥಿಗಳು ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ಸರ್ಕಾರ ಸೂಚಿಸಿದೆ.
ಭಾರತಕ್ಕೆ ಆಗಮಿಸಿರುವ ಶೇಖ್ ಹಸೀನಾ ಅವರನ್ನು ಘಾಜಿಯಾಬಾದ್ನ ಹಿಂಡನ್ ಏರ್ ಬೇಸ್ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾಗಿದ್ದು ಅವರ ಜೊತೆ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಶೇಖ್ ಹಸೀನಾ ಅವರು ಲಂಡನ್ಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಶೇಖ್ ಹಸೀನಾ ಭಾರತಕ್ಕೆ ಬಂದಿರುವುದು, ಬಾಂಗ್ಲಾದೇಶದ ಹಿಂಸಾಚಾರ, ಗಡಿ ಬಿಕ್ಕಟ್ಟು ಸೇರಿ ಹಲವು ವಿಷಯಗಳನ್ನು ಮೋದಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.