ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾದಲ್ಲಿ ಮಲಯಾಳಂ ನಟಿ ಮಮಿತಾ ಬೈಜು ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ದಳಪತಿ 69’ ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದಲ್ಲಿ ಮಮಿತಾ ಕೂಡ ಒಂದು ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ದಳಪತಿ ವಿಜಯ್ ಸದ್ಯ ರಾಜಕೀಯಕ್ಕೆ ಎಂಟ್ರಿಕೊಡಲು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅದೇ ಕಾರಣಕ್ಕೆ ಸಿನಿಮಾಗಳಿಂದ ದೂರವಿರಲು ವಿಜಯ್ ಮುಂದಾಗಿದ್ದಾರೆ. ಈಗಾಗಲೇ ತಮ್ಮದೆ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಸದ್ಯ ‘GOAT’ ಚಿತ್ರದಲ್ಲಿ ನಟಿಸುತ್ತಿರುವ ಅವರು, ಆ ಬಳಿಕ ಅವರು ವೃತ್ತಿ ಜೀವನದ ಕೊನೆಯ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಮಮಿತಾ ಕೂಡ ಕಾಣಿಸಿಕೊಳ್ಳಲಿದ್ದಾರಂತೆ.
‘ದಳಪತಿ 69’ ಚಿತ್ರವನ್ನು ಎಚ್. ವಿನೋದ್ ನಿರ್ದೇಶಿಸುತ್ತಾರೆ ಎಂದು ವರದಿ ಆಗಿದೆ. ವರದಿಗಳ ಪ್ರಕಾರ ಮಮಿತಾ ಅವರು ನಾಯಕಿ ಅಲ್ಲ, ಬದಲಿಗೆ ವಿಜಯ್ ಸಹೋದರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೊಂದೇ ಭಾಕಿ ಇದೆ.
2017ರಲ್ಲಿ ಮಮಿತಾ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಸರ್ವೋಪರಿ ಪಾಲಕ್ಕಾರನ್’ ಅವರು ನಟಿಸಿದ ಮೊದಲ ಸಿನಿಮಾ. ಇದಾದ ಬಳಿಕ ಅವರು ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಈ ವರ್ಷ ರಿಲೀಸ್ ಆದ ‘ಪ್ರೇಮಲು’ ಸಿನಿಮಾ ಅವರ ವೃತ್ತಿ ಜೀವನಕ್ಕೆ ಮೈಲೇಜ್ ನೀಡಿದೆ. ಇದಾದ ಬಳಿಕ ಅವರಿಗೆ ಹಲವು ಆಫರ್ಗಳು ಹುಡುಕಿ ಬರುತ್ತಿವೆ. ಜಿವಿ ಪ್ರಕಾಶ್ ಕುಮಾರ್ ಅಭಿನಯದ ‘ರೆಬೆಲ್’ ಚಿತ್ರದ ಮೂಲಕ ಮಮಿತಾ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆದಾಗ್ಯೂ ತಮಿಳು ಚಿತ್ರಗಳಿಂದ ಅವರಿಗೆ ಸಾಕಷ್ಟು ಆಫರ್ ಗಳು ಬರ್ತಿವೆ.