ನಟಿ ಕಂಗನಾ ರಣಾವತ್ ಆಗಾಗ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಲೆ ಇರುತ್ತಾರೆ. ಸಿನಿಮಾ ರಂಗದಲ್ಲಿ ಇದ್ದಷ್ಟು ದಿನವೂ ತಮ್ಮ ಹೇಳಿಕೆಗಳ ಮೂಲಕವೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದ ನಟಿ ಇದೀಗ ರಾಜಕೀಯಕ್ಕೆ ಎಂಟ್ರಿಕೊಟ್ಟ ಬಳಿಕವೂ ಅದನ್ನು ಮುಂದುವರೆಸಿದ್ದಾರೆ. ಬಿಜೆಪಿ ಪಕ್ಷದಿಂದ ಸಂಸದೆಯಾಗಿ ಆಯ್ಕೆ ಆಗಿರುವ ಕಂಗನಾ ರಣಾವತ್ ಅವರು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಟೀಕೆ ಮಾಡುವ ಭರದಲ್ಲಿ ತಿರುಚಿದ ಫೋಟೋವನ್ನು ಹಂಚಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ನಟಿಯ ವಿರುದ್ಧ 40 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಜಾತಿ ಗಣತಿ ಬಗ್ಗೆ ಮಾತನಾಡಿದ್ದರು. ಅದನ್ನು ವಿರೋಧಿಸುವ ಸಲುವಾಗಿ ಕಂಗನಾ ಎಡಿಟೆಡ್ ಫೋಟೋವೊಂದರನ್ನು ಹಂಚಿಕೊಂಡರು. ಆ ಫೋಟೋದಲ್ಲಿ ರಾಹುಲ್ ಗಾಂಧಿ ತಲೆಗೆ ಮುಸ್ಲಿಂ ಟೋಪಿ, ಕ್ರಿಸ್ಚಿಯನ್ ಕ್ರಾಸ್, ಹಿಂದೂಗಳ ತಿಲಕ ಮುಂತಾದ್ದನ್ನು ಹಾಕಿ ಎಡಿಟ್ ಮಾಡಲಾಗಿತ್ತು. ಇದರಿಂದ ರಾಹುಲ್ ಗಾಂಧಿ ಅವರಿಗೆ ಅವಮಾನ ಆಗಿದೆ ನೆಟ್ಟಿಗರು ಗರಂ ಆಗಿದ್ದರು.
ಈ ವಿಚಾರಕ್ಕೆ ಸಂಬಂಧಿಸಿ ಕಂಗನಾ ರಣಾವತ್ ವಿರುದ್ಧ ಸುಪ್ರೀಂ ಕೋರ್ಟ್ ಲಾಯರ್ ನರೇಂದ್ರ ಮಿಶ್ರಾ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯಾವುದೇ ವ್ಯಕ್ತಿಯ ಪೋಟೋವನ್ನು ತಿರುಚಿ, ಅದನ್ನು ಆನ್ಲೈನ್ನಲ್ಲಿ ಶೇರ್ ಮಾಡುವುದು ಮಾಹಿತಿ-ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅಪರಾಧ ಆಗುತ್ತದೆ. ಇದರಿಂದ ರಾಹುಲ್ ಗಾಂಧಿ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದಂತೆ ಆಗಿದೆ ಎಂದು ನರೇಂದ್ರ ಮಿಶ್ರಾ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಕಂಗನಾ ರಣಾವತ್ ಅವರು ಆಯ್ಕೆ ಆಗಿದ್ದಾರೆ. ರಾಜಿಕೀಯಕ್ಕೆ ಎಂಟ್ರಿಕೊಟ್ಟ ಆರಂಭದಿಂದಲೂ ಕಂಗನಾ ಒಂದಲ್ಲ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ತಿದ್ದಾರೆ. ಸದ್ಯದ ಮಟ್ಟಿಗೆ ಸಿನಿಮಾಗಳ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿರುವ ನಟಿ ಫುಲ್ ಟೈಮ್ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕಂಗನಾ ನಿರ್ದೇಶನ, ನಿರ್ಮಾಣ ಮಾಡಿ, ನಟಿಸಿರುವ ‘ಎಮರ್ಜೆನ್ಸಿ’ ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆ ಆಗಲಿದೆ.