ಬಾಲಿವುಡ್ ನಟಿ ಅಕ್ಷಯ್ ಕುಮಾರ್ ಆ.8ರಂದು ಮುಂಬೈನ ಹಾಜಿ ಅಲಿ ದರ್ಗಾಗೆ ಭೇಟಿ ನೀಡಿದ್ದು ದರ್ಗಾ ನವೀಕರಣಕ್ಕೆ ಬರೋಬ್ಬರಿ 1.21 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಅಕ್ಷಯ್ ಮೊದಲಿನಿಂದಲೂ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಸಿನಿಮಾಗಳು ಸತತವಾಗಿ ಸೋತಿದ್ದರೂ ಕೂಡ ಅವರ ಮನೋಭಾವದಲ್ಲಿ ಬದಲಾವಣೆ ಆಗಿಲ್ಲ. ಹಾಜಿ ಅಲಿ ದರ್ಗಾಗೆ ಕೋಟ್ಯಂತರ ರೂಪಾಯಿ ನೀಡಿ ಮೆಚ್ಚುಗೆ ಘಳಿಸಿದ್ದಾರೆ.
ಅಕ್ಷಯ್ ಕುಮಾರ್ ಅವರು ನೀಡಿರುವ 1.21 ಕೋಟಿ ರೂಪಾಯಿ ಹಣದ ಸಹಾಯದಿಂದ ಹಾಲಿ ಅರ್ಲಿ ದರ್ಗಾದ ನವೀಕರಣ ಮಾಡಲಾಗುವುದು. ಅಕ್ಷಯ್ ಕುಮಾರ್ ಅವರು ತಮ್ಮ ಬ್ಯುಸಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ದರ್ಗಾಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಿದ್ದಾರೆ. ಸ್ವರ್ಗದಲ್ಲಿರುವ ತಮ್ಮ ಪಾಲಕರ ಸಲುವಾಗಿ ಅವರು ದರ್ಗಾದಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾಗೆ ಮುದಾಸರ್ ಅಜೀಜ್ ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಫರ್ದೀನ್ ಖಾನ್, ವಾಣಿ ಕಪೂರ್, ತಾಪ್ಸಿ ಪನ್ನು, ಪ್ರಗ್ಯಾ ಜೈಸ್ವಾಲ್ ಮುಂತಾದವರು ನಟಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್ ಕುಮಾರ್ ಅವರಿಗೆ ಸರಿಯಾದ ಗೆಲುವು ಸಿಕ್ಕಿಲ್ಲ. ಸಿನಿಮಾಗಳ ಆಯ್ಕೆಯಲ್ಲಿ ಅವರು ಎಡವುತ್ತಿದ್ದಾರೆ ಎಂಬ ಅಭಿಪ್ರಾಯ ಹಲವರದ್ದು. ಅಲ್ಲದೇ, ಅವಸರದಲ್ಲಿ ಸಿನಿಮಾದ ಕೆಲಸಗಳನ್ನು ಮುಗಿಸುತ್ತಿರುವುದರಿಂದ ಗುಣಮಟ್ಟದ ಕಡೆಗೆ ಗಮನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಟೀಕಿಸಿದ್ದಾರೆ. ಇಂದಾದ್ರು ಅಕ್ಷಯ್ ಕುಮಾರ್ ಅವರಿಗೆ ಗೆಲುವು ಸಿಗುತ್ತಾ ಎಂದು ಕಾದು ನೋಡಬೇಕಿದೆ.